ADVERTISEMENT

ಭಾರತ್ ಪಾಕ್ ಮಾತುಕತೆ ಆರಂಭ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST

ನವದೆಹಲಿ (ಪಿಟಿಐ): ಭಾರತ ಹಾಗೂ ಪಾಕಿಸ್ತಾನಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಎರಡು ದಿನಗಳ ಸಭೆ ಬುಧವಾರ ಇಲ್ಲಿ ಆರಂಭವಾಯಿತು. ನಿರೀಕ್ಷೆಯಂತೆ ಭಯೋತ್ಪಾದನೆ ಅದರಲ್ಲೂ ಈಚೆಗೆ ಬಂಧಿಸಿರುವ ಉಗ್ರ ಅಬು ಜುಂದಾಲ್‌ನ ಹೇಳಿಕೆ, ಕಾಶ್ಮೀರ ಸಮಸ್ಯೆಯ ವಿಷಯಗಳೇ ಪ್ರಧಾನವಾಗಿ ಚರ್ಚೆಗೆ ಬಂದವು ಎನ್ನಲಾಗಿದೆ.

ಉಭಯ ದೇಶಗಳ ನಡುವೆ ಶಾಂತಿ ಹಾಗೂ ಸುಭದ್ರತೆ ಕಾಯ್ದುಕೊಳ್ಳುವ ದಿಸೆಯಲ್ಲಿ ಈಗಾಗಲೆ ಸಭೆಯ ಕಾರ್ಯಸೂಚಿಯಂತೆ ಚರ್ಚೆಗಳು ನಡೆದಿದ್ದು, ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನೂ ಪ್ರಸ್ತಾಪಿಸಲಾಯಿತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದರು. ಆದರೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ಮುಂಬೈ ಮೇಲಿನ ದಾಳಿ ಹಾಗೂ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಉಗ್ರರ ಚಟುವಟಿಕೆ ಕುರಿತು ಭಾರತ ಈ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದೆ.

ಮುಂಬೈ ದಾಳಿಯ ಪ್ರಮುಖ ಸೂತ್ರಧಾರ ಅಬು ಜುಂದಾಲ್‌ನಿಗೆ ಪಾಕಿಸ್ತಾನ ಸರ್ಕಾರ ರಿಯಾಸತ್ ಅಲಿ ಹೆಸರಿನಲ್ಲಿ ನೀಡಿದ ಪಾಸ್‌ಪೋರ್ಟ್‌ನಿಂದಾಗಿ ವಿಧ್ವಂಸಕ ಕೃತ್ಯಗಳಿಗೆ ಅಲ್ಲಿಯ ಆಡಳಿತದ ಬೆಂಬಲ ಇರುವುದು ಖಚಿತವಾಗಿದೆ.
 
ಈ ಕುರಿತು ಸಹ ಭಾರತದ ಅಧಿಕಾರಿಗಳು ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗುರುವಾರವೂ ಮಾತುಕತೆ ಮುಂದುವರೆಯಲಿದ್ದು ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟು, ಅಣುಶಕ್ತಿ ಕಾರ್ಯಕ್ರಮ ಕುರಿತೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.