ADVERTISEMENT

ಭಾರಿ ಮಳೆ: ಬಂಗಾಳಕೊಲ್ಲಿಯಲ್ಲಿ 550 ಮೀನುಗಾರರು ಕಣ್ಮರೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 13:10 IST
Last Updated 17 ಜೂನ್ 2011, 13:10 IST

ಕೋಲ್ಕತ್ತ (ಪಿಟಿಐ): ಭಾರಿ ಮಳೆ ಹಾಗೂ ಪ್ರತಿಕೂಲ ಹವಾಮಾನದ ಪರಿಣಾಮವಾಗಿ, ಬಂಗಾಳ ಕೊಲ್ಲಿಗೆ  33 ದೋಣಿಗಳಲ್ಲಿ ತೆರಳಿದ್ದ ಸುಮಾರು 550ಕ್ಕೂ ಹೆಚ್ಚು ಮೀನುಗಾರರು ಶುಕ್ರವಾರ ಕಣ್ಮರೆಯಾಗಿದ್ದು, ಅವರ ಪತ್ತೆಗಾಗಿ ಕರಾವಳಿ ಕಾವಲು ಪಡೆ ಮತ್ತು ಡೊರೈನರ್ ವಿಮಾನದ ನೆರವಿನೊಂದಿಗೆ ಕಾರ್ಯಾಚರಣೆ ಆರಂಭಿಸಲಾಗಿದೆ.

ಈ ದೋಣಿಗಳು ದಕ್ಷಿಣ 24 ಪರಗಣ ಜಿಲ್ಲೆಯ ಕಾಕ್ ದ್ವೀಪ ಮತ್ತು ನೆರೆಹೊರೆಯ ಪ್ರದೇಶಗಳಿಂದ ಸಮುದ್ರಕ್ಕೆ ಶುಕ್ರವಾರ ತೆರಳಿದ್ದು, ಭಾರಿ ಮಳೆಗೆ ಸಿಲುಕಿಹಾಕಿಕೊಂಡು ಕಣ್ಮರೆಯಾಗಿವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್ ಎಸ್ ನಿಗಮ್ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದರು.

ಕರಾವಳಿ ಕಾವಲು ಪಡೆಯ ಒಂದು ಹಡಗು ಮತ್ತು ಡೊರೈನರ್ ವಿಮಾನವನ್ನು ದೋಣಿಗಳ ಪತ್ತೆಗಾಗಿ ರವಾನಿಸಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ. ಆದರೆ ಬಿರುಗಾಳಿ ಮತ್ತು ಅತಿ ಕೆಳಗಿರುವ ಮೋಡಗಳು ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿವೆ ಎಂದು ರಕ್ಷಣಾ ಮೂಲಗಳು ಹೇಳಿವೆ.

ಕಣ್ಮರೆಯಾಗಿರುವ ಮೀನುಗಾರರ ಪತ್ತೆ ಸಲುವಾಗಿ ನೌಕಾಪಡೆಯನ್ನೂ  ಸಂಪರ್ಕಿಸಲಾಗಿದೆ ಎಂದು ನಿಗಮ್ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.