ADVERTISEMENT

ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲು

ಮಧ್ಯಪ್ರದೇಶ ವಿಧಾನಸಭೆಯಲ್ಲಿ ಅವಿರೋಧವಾಗಿ ಮಸೂದೆ ಅಂಗೀಕಾರ

ಪಿಟಿಐ
Published 4 ಡಿಸೆಂಬರ್ 2017, 19:30 IST
Last Updated 4 ಡಿಸೆಂಬರ್ 2017, 19:30 IST
ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲು
ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲು   

ಭೋಪಾಲ್‌ : ಹನ್ನೆರಡು ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದರೆ ಅಂತಹ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆಯನ್ನು ಮಧ್ಯಪ್ರದೇಶ ವಿಧಾನಸಭೆಯು ಸೋಮವಾರ ಒಮ್ಮತದಿಂದ ಅಂಗೀಕರಿಸಿದೆ.

ದೇಶದಲ್ಲಿ ಇಂಥದ್ದೊಂದು ಕಾನೂನನ್ನು ಮೊದಲ ಬಾರಿ ಜಾರಿಗೆ ತಂದ ರಾಜ್ಯ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶ ಪಾತ್ರವಾಗಿದೆ.

ಕಾನೂನು ಸಚಿವ ರಾಮ್‌ಪಾಲ್ ಸಿಂಗ್ ಅವರು ಮಸೂದೆಯನ್ನು ಮಂಡಿಸಿದರು. ವಿವರವಾಗಿ ಚರ್ಚೆ ನಡೆದ ನಂತರ ಮಸೂದೆಯನ್ನು ಅಂಗೀಕರಿಸಲಾಯಿತು.

ADVERTISEMENT

‘ರಾಜ್ಯ ವಿಧಾನಸಭೆಗೆ ಇದೊಂದು ಐತಿಹಾಸಿಕ ದಿನ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಆಶಯದಂತೆ ಈ ಮಸೂದೆಯನ್ನು ಅಂಗೀಕರಿಸಲಾಯಿತು’ ಎಂದು ಅವರು ತಿಳಿಸಿದರು.

‘ಕಠಿಣ ಶಿಕ್ಷೆಯಿಂದಾಗಿ ಮಾತ್ರ ಬುದ್ಧಿ ಕಲಿಯುವ ಜನ ಈ ಸಮಾಜದಲ್ಲಿದ್ದಾರೆ. ಅವರನ್ನು ನಿಯಂತ್ರಿಸಲು ಈ ಕಾಯ್ದೆ ಸಮರ್ಥವಾಗಿದೆ. ಅತ್ಯಾಚಾರದಂಥ ಪ್ರಕರಣಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತೇವೆ’ ಎಂದು ಚೌಹಾಣ್ ಮಸೂದೆಯನ್ನು ಸ್ವಾಗತಿಸಿದರು.

‘ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸಲಾಗುತ್ತದೆ. ಅವರು ಅಂಗೀಕರಿಸಿದ ಬಳಿಕ ಅದು ಕಾನೂನಾಗಿ ಜಾರಿಗೆ ಬರಲಿದೆ’ ಎಂದು ಗೃಹ ಸಚಿವ ಭೂಪೇಂದ್ರ ಸಿಂಗ್‌ ಸದನದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ಅತ್ಯಾಚಾರಕ್ಕೆ 376 (ಎ) ಹಾಗೂ ಸಾಮೂಹಿಕ ಅತ್ಯಾಚಾರಕ್ಕೆ 376 (ಡಿ, ಎ) ಅಡಿ ಶಿಕ್ಷೆ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.