ADVERTISEMENT

ಮಛಿಲಿಗೆ ಮತ್ತೆ ಜೀವತಂದ ಸಾಕ್ಷ್ಯಚಿತ್ರ

ರಾಜಸ್ಥಾನದ ರಣಥಂಬೊರ್ ರಾಷ್ಟ್ರೀಯ ಉದ್ಯಾನವನ್ನು ಆಳಿದ್ದ ಹೆಣ್ಣುಹುಲಿ

ಪಿಟಿಐ
Published 6 ಮೇ 2018, 19:30 IST
Last Updated 6 ಮೇ 2018, 19:30 IST
‘ಮೀಟ್‌ ದಿ ಮಛಿಲಿ’ ಸಾಕ್ಷ್ಯಚಿತ್ರದ ಪೋಸ್ಟರ್‌
‘ಮೀಟ್‌ ದಿ ಮಛಿಲಿ’ ಸಾಕ್ಷ್ಯಚಿತ್ರದ ಪೋಸ್ಟರ್‌   

ನವದೆಹಲಿ: ‘ರಾಜಸ್ಥಾನದ ರಣಥಂಬೊರ್ ರಾಷ್ಟ್ರೀಯ ಉದ್ಯಾನವನ್ನು ಸುಮಾರು ಒಂದೂವರೆ ದಶಕಗಳ ಕಾಲ ಅನಭಿಷಿಕ್ತ ರಾಣಿಯಾಗಿ ಆಳಿದ್ದ ‘ಮಛಿಲಿ’ ಎಂಬ ಹುಲಿಗೆ ಸಾಕ್ಷ್ಯಚಿತ್ರದ ಮೂಲಕ ಜೀವತುಂಬಲು ಪ್ರಯತ್ನಿಸಲಾಗಿದೆ’ ಎಂದು ವನ್ಯಜೀವಿ ತಜ್ಞ ಸುಬ್ಬಯ್ಯ ನಲ್ಲಮುತ್ತು ಹೇಳಿದ್ದಾರೆ.

20 ವರ್ಷ ಬದುಕಿದ್ದ ಮಛಿಲಿಯ ಕೊನೆಯ ಒಂಬತ್ತು ವರ್ಷಗಳ ಜೀವನದ ಅಮೂಲ್ಯ ಕ್ಷಣಗಳನ್ನು ಒಳಗೊಂಡಿರುವ ‘ಮೀಟ್‌ ದಿ ಮಛಿಲಿ: ವರ್ಲ್ಡ್ಸ್ ಮೋಸ್ಟ್ ಫೇಮಸ್ ಟೈಗರ್‌’ ಸಾಕ್ಷ್ಯಚಿತ್ರವನ್ನು ವನ್ಯಜೀವಿ ಛಾಯಾಗ್ರಾಹಕರೂ ಆಗಿರುವ ನಲ್ಲಮುತ್ತು ನಿರ್ದೇಶಿಸಿದ್ದಾರೆ. ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ನ ನ್ಯಾಚುರಲ್ ಹಿಸ್ಟರಿ ಘಟಕವು ಇದನ್ನು ನಿರ್ಮಿಸಿದೆ. ದೆಹಲಿಯಲ್ಲಿ ಈಚೆಗೆ ಈ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸ ಲಾಗಿತ್ತು.

‘ಸಾಕ್ಷ್ಯಚಿತ್ರಗಳು ಮತ್ತು ಛಾಯಾಚಿತ್ರಗಳ ಮೂಲಕ ವನ್ಯಜೀವಿ ಸಂರಕ್ಷಣೆಗೆ ಜನರನ್ನು ಉತ್ತೇಜಿಸುವುದು ನನ್ನ ಉದ್ದೇಶ. ಹುಲಿಗಳಿಗೂ ಭಾವನೆಗಳಿವೆ, ಅವೂ ಯಾವುದೋ ಸ್ಥಳ–ಜೀವಿಗಳಿಗೆ ಗಾಢವಾಗಿ ಅಂಟಿಕೊಳ್ಳುತ್ತವೆ ಎಂಬುದನ್ನು ತಿಳಿದಾಗ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ವನ್ಯಜೀವಿಗಳ ಸಂರಕ್ಷಣೆಗೆ ಒಲವು ತೋರುತ್ತಾರೆ’ ಎಂದು ನಲ್ಲಮುತ್ತು ಹೇಳಿದ್ದಾರೆ.‘ಯಾವುದೇ ಸಾಕ್ಷ್ಯಚಿತ್ರಗಳಲ್ಲಿ ಒಂದು ಕಥೆ ಇರಬೇಕು ಎಂದು ನಾನು ಬಯಸುತ್ತೇನೆ. ಆ ಕಥೆ ಪರಿಪೂರ್ಣವಾಗುವವರೆಗೂ ನನ್ನ ಸಾಕ್ಷ್ಯಚಿತ್ರ ಸಿದ್ಧವಾಗುವುದೇ ಇಲ್ಲ. ಹೀಗಾಗಿಯೇ ಮಛಿಲಿಯ ಕಥೆಯನ್ನು ಸೆರೆಹಿಡಿಯಲು ಒಂಬತ್ತು ವರ್ಷ ಬೇಕಾಯಿತು’ ಎಂದು ಅವರು ಹೇಳಿದ್ದಾರೆ.

ADVERTISEMENT

ವಿಶ್ವದಲ್ಲಿ ಅತಿಹೆಚ್ಚು ಛಾಯಾಚಿತ್ರಗಳಲ್ಲಿ ಸೆರೆಯಾದ ಹುಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಛಿಲಿ 2016ರಲ್ಲಿ ಮೃತಪಟ್ಟಿತ್ತು.

ಹುಲಿರಾಣಿಯ ಜೀವನಗಾಥೆ

‘ಮಛಿಲಿ ವಯಸ್ಕಳಾದ ನಂತರ ಆಕೆ ರಣಥಂಬೊರ್‌ನ ರಾಣಿಯಾಗಿ ರೂಪುಗೊಂಡಿದ್ದು, ಆಕೆಯ ಸಂಗಾತಿಗಳನ್ನು ಹದ್ದುಬಸ್ತಿನಲ್ಲಿಟ್ಟದ್ದು ಈ ಸಾಕ್ಷ್ಯಚಿತ್ರದಲ್ಲಿದೆ. ಆಕೆಯ ಮಕ್ಕಳು ಪ್ರವರ್ಧಮಾನಕ್ಕೆ ಬಂದು, ಆಕೆಯನ್ನೇ ಮೂಲೆಗೆ ತಳ್ಳಿದ್ದೂ ಈ ಸಾಕ್ಷ್ಯಚಿತ್ರದಲ್ಲಿ ಇದೆ. ಆಕೆಯ ಜೀವನದ ಕೆಲವು ಅತ್ಯಮೂಲ್ಯ ಕ್ಷಣಗಳನ್ನೂ ಸೆರೆಹಿಡಿದಿದ್ದೇನೆ. ಆಕೆ ತನ್ನ ಕೊನೆಯ ದಿನ ನೆಲದ ಮೇಲೆ ತೆವಳುತ್ತಾ ಪ್ರಾಣ ಬಿಟ್ಟದ್ದೂ ಇದರಲ್ಲಿದೆ’ ಎಂದು ನಲ್ಲಮುತ್ತು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.