ADVERTISEMENT

ಮಣಿಪುರ ಗಡಿ: ಯೋಧರ ಗುಂಡಿಗೆ ಬಂಡುಕೋರ ಬಲಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ಇಂಫಾಲ (ಪಿಟಿಐ):  ಮ್ಯಾನ್ಮಾರ್ ಗಡಿ ಭಾಗದ ಮೂಲಕ ಮಣಿಪುರಕ್ಕೆ ನುಸುಳಲು ಯತ್ನಿಸಿದ ಬಂಡುಕೋರರೆಡೆಗೆ ಅರೆಸೇನಾ ಪಡೆ ಯೋಧರು ಹಾರಿಸಿದ ಗುಂಡಿಗೆ ಒಬ್ಬ ಬಂಡುಕೋರ ಬಲಿಯಾಗಿದ್ದಾನೆ.

ಜ.28ರಂದು ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯನ್ನು ಭಂಗಗೊಳಿಸುವ ದುರುದ್ದೇಶದಿಂದಲೇ ಬಂಡುಕೋರರು ಒಳನುಸುಳಲು ಯತ್ನಿಸಿದ್ದರು ಎನ್ನಲಾಗಿದೆ.

ಹತನಾದವನ ಬಳಿ ಇದ್ದ 9 ಮಿ.ಮಿ ಬಂದೂಕು, ಹಲವು ಸುತ್ತುಗಳ ಗುಂಡು ಹಾಗೂ 10 ಕೆ.ಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಮುನ್ನ ಅರೆಸೇನಾ ಪಡೆ ಹಾಗೂ ಬಂಡುಕೋರರ ಮುನ್ನ ಭಾರಿ ಗುಂಡಿನ ಕಾಳಗ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಕಳೆದ ಎರಡು ವಾರಗಳಲ್ಲಿ ಬಂಡುಕೋರರು ರಾಜ್ಯದೊಳಕ್ಕೆ ನುಸುಳಲು ನಡೆಸಿದ ಮೂರನೇ ಪ್ರಯತ್ನ ಇದು ಎಂದೂ ಹೇಳಲಾಗಿದೆ. ರಾಜ್ಯದಲ್ಲಿ ಏಳು ಪ್ರಮುಖ ಸಂಘಟನೆಗಳು ಸೇರಿ `ರೆವಲ್ಯೂಷನರಿ ಮೂವ್‌ಮೆಂಟ್~ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡೆದ್ದಿವೆ.

 ಯೋಧ ಸಾವು

 ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯಲ್ಲಿ  ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಡಿ ರಕ್ಷಣಾ ಪಡೆಯ ಒಬ್ಬ ಯೋಧ ಮೃತಪಟ್ಟಿದ್ದು ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದೇ ತಿಂಗಳ 28ರಿಂದ ಆರಂಭವಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲು ತ್ರಿಪುರಾದಿಂದ ತೆಮೆಂಗ್ಲಾಂಗ್ ಜಿಲ್ಲೆಗೆ ಪ್ರಯಾಣಿಸುವಾಗ ಮಾರ್ಗ ಮಧ್ಯದಲ್ಲಿ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.