ADVERTISEMENT

ಮತ್ತೆ ಸಿಡಿದೇಳುವೆ: ರಾಮ್‌ದೇವ್ ಸವಾಲು

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ಹರಿದ್ವಾರ (ಐಎಎನ್‌ಎಸ್): ಉಪವಾಸ ಮುಷ್ಕರವನ್ನು ಬಲವಂತವಾಗಿ ಮುರಿದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಿಡಿಯಾಗಿರುವ ಬಾಬಾ ರಾಮ್‌ದೇವ್, ಇಂತಹ ದೌರ್ಜನ್ಯಗಳಿಗೆ ಅಂಜುವುದಿಲ್ಲ ಎಂದಿದ್ದಾರಲ್ಲದೆ, ರಾಷ್ಟ್ರವ್ಯಾಪಿ ಚಳವಳಿಗೆ ಮುಂದಾಗುವುದಾಗಿ ಸವಾಲು ಹಾಕಿದ್ದಾರೆ.

ಒಂದು ಲಕ್ಷ ಭಕ್ತರ ಮೇಲೆ `ಪೊಲೀಸ್ ದೌರ್ಜನ್ಯ~ ನಡೆಸಿರುವ ಕೃತ್ಯದ ಹಿಂದೆ ಸೋನಿಯಾ ಗಾಂಧಿ ಕೈವಾಡ ಇದೆ ಎಂದು ಶಂಕಿಸಿರುವ ರಾಮ್‌ದೇವ್, ಅವರ ವಿರುದ್ಧ ಕಿಡಿಕಾರಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆದ ಹಲ್ಲೆ ಪ್ರಜಾಸತ್ತೆಗೆ ಬಂದೊದಗಿದ ಕಳಂಕ ಎಂದ ಬಾಬಾ, `ಸರ್ಕಾರ ನನ್ನನ್ನು ಮುಗಿಸಲು ಯತ್ನಿಸುತ್ತಿದೆ~ ಎಂದು  ಆಪಾದಿಸಿದರು. ಈ ಶಂಕೆ ನನಗೆ ಸಚಿವರು ಭೇಟಿ ಮಾಡಿದಾಗಲೇ ಸಿಕ್ಕಿತ್ತು ಎಂದು ಆಪಾದಿಸಿದರು.

ಪೊಲೀಸರು ದೆಹಲಿಯ ರಾಮಲೀಲಾ ಮೈದಾನಕ್ಕೆ ಶನಿವಾರ ಮಧ್ಯರಾತ್ರಿ 3 ಗಂಟೆಯ ನಂತರ ನುಗ್ಗಿ, ರಾಮ್‌ದೇವ್ ಅವರನ್ನು ಬಂಧಿಸಿ, ಭಕ್ತರ ಮೇಲೆ ಲಾಠಿ, ಅಶ್ರುವಾಯು ಪ್ರಯೋಗಿಸಿ ಹೊರಹಾಕಿದ ನಂತರ,  ಆಶ್ರಮಕ್ಕೆ ಮರಳಿರುವ ಬಾಬಾ ತೀವ್ರ ಆಘಾತಕ್ಕೆ ಒಳಗಾದವರಂತೆ ಕಂಡುಬಂದರು.

ಸರ್ಕಾರ ನನ್ನನ್ನು ಅಪಹರಿಸಿ ಕೊಲ್ಲಲು ಅಥವಾ ಎಲ್ಲೋ ಕಳುಹಿಸಲು ಬಯಸಿತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.

ಕಣ್ಣಲ್ಲಿ ನೀರು ತುಂಬಿಕೊಂಡು ಗದ್ಗದಿತರಾದ ಬಾಬಾ, ನಾನು ಎಷ್ಟೇ ಬೇಡಿಕೊಂಡರೂ ಪೊಲೀಸರು ಮಕ್ಕಳು ಮತ್ತು ಮಹಿಳೆಯರ ಮೇಲೆ ಲಾಠಿ ಪ್ರಹಾರ ಮಾಡಿದರು. ಯಾವುದೇ ದೇಶದಲ್ಲೂ ಪ್ರಜೆಗಳ ಮೇಲೆ ಇಂತಹ ಕಠಿಣ ಕ್ರಮ ತೆಗೆದುಕೊಂಡಿರಲಿಕ್ಕಿಲ್ಲ. ಶನಿವಾರದ ಘಟನೆಯು 1975ರ ತುರ್ತು ಸ್ಥಿತಿಯ ಕರಾಳ ದಿನಗಳನ್ನು ಮತ್ತು ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೆನಪಿಸುತ್ತದೆ ಎಂದು ಹೇಳಿದರು.

ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಮತ್ತು ಕೇಂದ್ರ ಸರ್ಕಾರ ತಮ್ಮನ್ನು ವಂಚಿಸಿದ್ದು ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಸೋನಿಯಾ ಗಾಂಧಿ ಮತ್ತು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಪತ್ರವನ್ನು ಸಲ್ಲಿಸುವಂತೆ ತಮಗೆ ತಿಳಿಸಿದ್ದರು ಎಂದು ಹೇಳಿದರು.

ಜೂನ್ 6ರಂದು ಎಲ್ಲ ಬೇಡಿಕೆಯನ್ನೂ ಈಡೇರಿಸಿದ ನಂತರ ನಿರಶನ ನಿಲ್ಲಿಸಲಾಗುತ್ತದೆ ಎಂಬ ಪತ್ರವನ್ನು ನಮ್ಮ ಕೈಯಲ್ಲಿ ಬಲಾತ್ಕಾರವಾಗಿ ಬರೆಸಿಕೊಂಡು ಅದನ್ನು ಪ್ರಧಾನಿ ಅವರಿಗೆ ಕೊಡುವುದಾಗಿ ತಿಳಿಸಲಾಗಿತ್ತು. ಆದರೆ ಸುಳ್ಳು ಹೇಳಿದ ಕಪಿಲ್ ಸಿಬಲ್ ನಮ್ಮನ್ನು ವಂಚಿಸಿ ಹಾದಿ ತಪ್ಪಿಸಿದರು ಎಂದು ಆಪಾದಿಸಿದರು.

ಸೋನಿಯಾ ಅವರು ಈ ದೇಶದಲ್ಲಿ ಹುಟ್ಟದಿದ್ದರೂ ದೇಶದ ಸೊಸೆ. ಆದರೆ ಒಂದು ಲಕ್ಷ ಜನತೆಯ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ನಡೆಸುವ ಮೂಲಕ ಈ ದೇಶದ ಜನರ ಮೇಲೆ ತಮಗೆ ಪ್ರೀತಿ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಟೀಕಿಸಿದರು.

ಸತ್ಯಾಗ್ರಹವನ್ನು ನಿಲ್ಲಿಸಿಲ್ಲ, ಬಲಾತ್ಕಾರವಾಗಿ ನಿಲ್ಲಿಸಲಾಗಿದೆ. ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಅವರು ಘೋಷಿಸಿದರು.
 

ಮುಖ್ಯಾಂಶಗಳು
* ರಾತ್ರಿ ದಿಢೀರ್ ಪೊಲೀಸ್ ಕಾರ್ಯಾಚರಣೆ, ಬಲವಂತ ತೆರವು
* ಸವಿ ನಿದ್ದೆಯಲ್ಲಿದ್ದವರ ಮೇಲೆ ಲಾಠಿ, ಅಶ್ರುವಾಯು
* ಬಾಬಾ ಜೀವಕ್ಕೆ ಅಪಾಯ ಎಂದ ಸರ್ಕಾರ
* ಸೋನಿಯಾ ವಿರುದ್ಧ ಬಾಬಾ ಕಿಡಿ
* ಮತ್ತೆ ಮಾತುಕತೆ ಇಲ್ಲ- ಕೇಂದ್ರದ ಕಟುಮಾತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.