ADVERTISEMENT

ಮತ್ತೊಂದು ದಾಳಿಗೆ ಸಂಚು - ಜುಂದಾಲ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 19:30 IST
Last Updated 6 ಜುಲೈ 2012, 19:30 IST

ನವದೆಹಲಿ (ಐಎಎನ್‌ಎಸ್):  ಮುಂಬೈ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ಅಬು ಜುಂದಾಲ್ ಹಮ್ಜಾ ಇಂಡಿಯನ್ ಮುಜಾಹಿದ್ದೀನ್ ಉಗ್ರರ ಜತೆಗೂಡಿ ಭಾರತದಲ್ಲಿ ಮುಂಬೈ ಮಾದರಿ ಮತ್ತೊಂದು ದಾಳಿಗೆ ಯೋಜಿಸಿದ್ದ ಎಂಬ ಸತ್ಯ ಈಗ ಬಯಲಾಗಿದೆ.

 ಜುಂದಾಲ್‌ನನ್ನು 15 ದಿನಗಳ ಕಾಲ ವಿಚಾರಣೆಗೆ ಒಳಪಡಿಸಿದಾಗ ಈ ಸಂಚಿನ ವಿವರ ದೊರಕಿದೆ ಎಂದು ತನಿಖಾ ಅಧಿಕಾರಿ ತಿಳಿಸಿದ್ದಾರೆ. ಲಷ್ಕರ್-ಏ-ತೊಯ್ಬಾ, ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಮೂಲಕ ಭಾರತದಲ್ಲಿ ಮತ್ತೊಂದು ಭಯೋತ್ಪಾದನಾ ದಾಳಿ ನಡೆಸಲು ಯೋಜಿಸಿತ್ತು.
 
ಶಸ್ತ್ರಾಸ್ತ್ರ, ಮದ್ದುಗುಂಡು ಸಂಗ್ರಹಿಸಲು ಇಂಡಿಯನ್ ಮುಜಾಹಿದ್ದೀನ್ ಉಗ್ರರಿಗೆ ನೆರವು ನೀಡಲು ಜುಂದಾಲ್‌ನನ್ನು ನೇಮಿಸಲಾಗಿತ್ತು. ಆದರೆ, ದಾಳಿ ನಡೆಸಬೇಕಾದ ಸ್ಥಳ ನಿಗದಿಯಾಗಿರಲಿಲ್ಲ ಎಂದು ಜುಂದಾಲ್ ಹೇಳಿದ್ದಾಗಿ ತನಿಖಾಧಿಯೊಬ್ಬರು ತಿಳಿಸಿದ್ದಾರೆ.

`ಪಾಕಿಸ್ತಾನದ ಲಾಹೋರ್ ಪೊಲೀಸ್ ಅಕಾಡೆಮಿಯ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದಂತೆ ನಾಸಿಕ್ ಪೊಲೀಸ್ ಅಕಾಡೆಮಿಯ ಮೇಲೂ ದಾಳಿ ನಡೆಸಲು `ಎಲ್‌ಇಟಿ- ಐಎಂ~ ಸಂಚು ನಡೆಸಿತ್ತು. ಅದಕ್ಕಾಗಿ ಲಾಹೋರ್ ಮೇಲೆ ನಡೆದ ದಾಳಿಯ ವಿಡಿಯೊ ದೃಶ್ಯಾವಳಿಯನ್ನು ಹಲವು ಬಾರಿ ವೀಕ್ಷಿಸಲಾಗಿತ್ತು.
 
ಆದರೆ, ಪುಣೆಯ ಜರ್ಮನಿ ಬೇಕರಿ ಸ್ಫೋಟ ಪ್ರಕರಣದಲ್ಲಿ ಮಿರ್ಜಾ ಹಿಮಾಯತ್ ಬೇಗ್ ಹಾಗೂ ಬಿಲಾಲ್ ಅವರನ್ನು ಬಂಧಿಸಿದ್ದರಿಂದ ಯೋಜನೆ ಮುಂದಕ್ಕೆ ಹಾಕಲಾಯಿತು. ಲಷ್ಕರ್ ಹಾಗೂ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗಳು ಬಹುಹಿಂದೆಯೇ ಜಂಟಿಯಾಗಿ ಉಗ್ರಗಾಮಿ ಕೃತ್ಯಗಳ ಸಂಚು ನಡೆಸುತ್ತಿವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.

ಕಸ್ಟಡಿ: ಎನ್‌ಐಎ ಅಳಲು
ನವದೆಹಲಿ (ಪಿಟಿಐ):
  `26/11ರ ಮುಂಬೈ ದಾಳಿ ಆರೋಪಿ ಅಬು ಜುಂದಾಲ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ~ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ದೆಹಲಿ ಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.

`ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜುಂದಾಲ್ ಕಸ್ಟಡಿಯನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ~ ಎಂದು ಸಂಸ್ಥೆಯ ಅಧಿಕಾರಿಗಳು, ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಧೀಶ ಎಚ್.ಎಸ್.ಶರ್ಮಾ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

  `ಗುರುವಾರ ದೆಹಲಿ ಮೆಟ್ರೋಪಾಲಿಟನ್ ನ್ಯಾಯಾಧೀಶರು ಜುಂದಾಲ್‌ನನ್ನು ವಿಚಾರಣೆಗಾಗಿ ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎನ್ನುವ ಅಂಶವನ್ನೂ ಅಧಿಕಾರಿಗಳು ಶರ್ಮಾ ಮುಂದೆ ವಿವರಿಸಿದರು.

`ಜುಲೈ 20ಕ್ಕೆ ಜುಂದಾಲ್‌ನ ಪೊಲೀಸ್ ಕಸ್ಟಡಿ ಅವಧಿ ಪೂರ್ಣಗೊಳ್ಳಲಿದ್ದು, ನಂತರ ಆತನನ್ನು ನಮ್ಮ ವಶಕ್ಕೆ ನೀಡುವಂತೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾಡುವುದಾಗಿ~ ಎನ್‌ಐಎ ಅಧಿಕಾರಿಗಳು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.