ADVERTISEMENT

ಮತ್ತೊಂದು ಮದುವೆಯಾದ ಕೌಸಲ್ಯ

ಮರ್ಯಾದೆಗೇಡು ಹತ್ಯೆಯಲ್ಲಿ ಪತಿಯನ್ನು ಕಳೆದುಕೊಂಡಿದ್ದ ಮಹಿಳೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 20:00 IST
Last Updated 9 ಡಿಸೆಂಬರ್ 2018, 20:00 IST
ಕೌಸಲ್ಯ-ಶಕ್ತಿ
ಕೌಸಲ್ಯ-ಶಕ್ತಿ   

ಕೊಯಂಬತ್ತೂರು: ಮರ್ಯಾದೆಗೇಡು ಪ್ರಕರಣದಲ್ಲಿ ಪತಿಯನ್ನು ಕಳೆದುಕೊಂಡಿದ್ದ ಸಾಮಾಜಿಕ ಕಾರ್ಯಕರ್ತೆ ಕೌಸಲ್ಯ ಭಾನುವಾರ ಮತ್ತೊಂದು ಮದುವೆಯಾಗಿದ್ದಾರೆ.

ವೆಲ್ಲೂರು ನಿವಾಸಿಯಾದಪರಾಯಿ (ತಮಟೆ) ಕಲಾವಿದ 27 ವರ್ಷದ ’ಶಕ್ತಿ‘ಯನ್ನು ವರಿಸಿದ್ದಾರೆ. ತಂತಾಯಿ ಪೆರಿಯಾರ್‌ ದ್ರಾವಿಡ ಕಳಗಂ (ಟಿಪಿಡಿಕೆ) ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.

23 ವರ್ಷದ ಕೌಸಲ್ಯ ಅವರು ಈ ಹಿಂದೆ ದಲಿತ ಸಮುದಾಯದ ಶಂಕರ್‌ ಎಂಬುವರನ್ನು ವಿವಾಹವಾಗಿದ್ದರು. ಇದಕ್ಕೆ ಕೌಶಲ್ಯ ಕುಟುಂಬಸ್ಥರು ವಿರೋಧಿಸಿದ್ದರು. 2016ರ ಮಾರ್ಚ್‌ ತಿಂಗಳಲ್ಲಿ ಇಲ್ಲಿನ ಉದಂಮಲ್‌ಪೇಟ್‌ನಲ್ಲಿ ಇಬ್ಬರ ಮೇಲೂ ಬಾಡಿಗೆ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದರಿಂದ ಶಂಕರ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ADVERTISEMENT

ಇಬ್ಬರ ಹತ್ಯೆಗೆ ಸುಪಾರಿ ನೀಡಿದ್ದ ಕೌಶಲ್ಯ ತಂದೆ, ಚಿಕ್ಕಪ್ಪ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿತ್ತು. ನಂತರ, ನ್ಯಾಯಾಲಯವು ಈ ಅಪರಾಧಿಗಳಿಗೆ ಈಗಾಗಲೇ ಗಲ್ಲುಶಿಕ್ಷೆ ವಿಧಿಸಿತ್ತು.

ತಮಟೆ ಸದ್ದಿನಲ್ಲಿ ಮೊಳಗಿದ ಪ್ರೇಮ: ಪತಿಯ ಸಾವಿನ ಬಳಿಕ ಕೌಶಲ್ಯ ಅವರು ಜಾತಿ ಆಧಾರಿತ ಹಿಂಸಾಚಾರದ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕಾಗಿ ತಮಟೆ ಕಲಿತು ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಶಕ್ತಿ ಪರಿಚಯವಾಗಿ ಪ್ರೀತಿ ಮೊಳಕೆಯೊಡೆದಿತ್ತು. ಇದೀಗ ಇಬ್ಬರು ಸತಿ–ಪತಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.