ADVERTISEMENT

ಮತ್ತೊಬ್ಬ `ದೇವಮಾನವ' ಸೆರೆ

ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಆರೋಪ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಸೆಹೋರ್ (ಮಧ್ಯಪ್ರದೇಶ), (ಪಿಟಿಐ): ಅಸಾರಾಮ್ ಬಾಪು ಅತ್ಯಾಚಾರ ಪ್ರಕರಣ ಸುದ್ದಿ ಮಾಡುತ್ತಿರುವ ಬೆನ್ನಲ್ಲಿಯೇ ಇದೀಗ ಮಧ್ಯಪ್ರದೇಶದಲ್ಲಿ ಇಂಥದ್ದೇ ಮತ್ತೊಂದು ಘಟನೆ ವರದಿಯಾಗಿದೆ.

24 ವರ್ಷದ ಮಹಿಳೆಯನ್ನು ತನ್ನ ಆಶ್ರಮದಲ್ಲಿ ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಆಕೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 65 ವರ್ಷದ ಸ್ವಯಂ ಘೋಷಿತ ದೇವ ಮಾನವನನ್ನು ಬಂಧಿಸಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಸೆಹೋರ್ ಜಿಲ್ಲೆಯ ನೀಲ್‌ಖಂದ್ ಗ್ರಾಮದಲ್ಲಿರುವ ಆಶ್ರಮದ ಮೇಲೆ ಮಂಗಳವಾರ ದಾಳಿ ನಡೆಸಿದ ಪೊಲೀಸರು ಮಹೇಂದ್ರ ಗಿರಿ ಅಲಿಯಾಸ್ ತುನ್ನು ಬಾಬಾ ಎಂಬಾತನನ್ನು ಬಂಧಿಸಿ, ಆತನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯನ್ನು ರಕ್ಷಿಸಿದ್ದಾರೆ.

ಈ ಮಹಿಳೆಯ ಪತಿ ಹಾಗೂ ಅತ್ತೆ ಕೂಡ ಇದೇ ಆಶ್ರಮದಲ್ಲಿ ವಾಸವಾಗಿದ್ದು, ಈಕೆಯ ಮೇಲೆ ಲೈಂಗಿಕ ಕಿರುಕುಳ ನೀಡುವುದಕ್ಕೆ ಬಾಬಾಗೆ ಕುಮ್ಮಕ್ಕು ನೀಡಿದ್ದರು ಎನ್ನಲಾಗಿದೆ. ಬಾಬಾ ಜತೆಗೆ ಇವರಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಈ ವರ್ಷದ ಮೇ ಮೂರರಂದು ಈ ಮಹಿಳೆ ವಿಶ್ರಾಂ ಬಂಜಾರಾ ಅವರನ್ನು ಮದುವೆಯಾಗಿದ್ದರು. ಆಗಿನಿಂದಲೂ ಈಕೆಗೆ ಬಾಬಾ ಲೈಂಗಿಕ ಕಿರುಕುಳ ನೀಡುತ್ತಿದ್ದ.ಅತ್ಯಾಚಾರ, ಅಕ್ರಮ ವಶಕ್ಕೆ ಸಂಬಂಧಿಸಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.