ADVERTISEMENT

ಮದ್ರಾಸ್ ಹೈಕೋರ್ಟ್ ಅಸಮಾಧಾನ

ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಚೆನ್ನೈ (ಪಿಟಿಐ): ತಮಿಳುನಾಡು ಮುಖ್ಯ­ಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾ­ಧೀಶರ ಧೊರಣೆಯ ಬಗ್ಗೆ ಮದ್ರಾಸ್‌ ಹೈಕೋರ್ಟ್ ತೀವ್ರ ಅಸಮಾಧಾನವನ್ನು ದಾಖಲಿಸಿದೆ.

ಪ್ರಕರಣದ ಮೂರನೇ ಪ್ರತಿವಾದಿ ಆಗಿ­ರುವ ಲೆಕ್ಸ್ ಪ್ರಾಪರ್ಟಿ ಡೆವಲ­ಪರ್ಸ್, ಮುಟ್ಟುಗೋಲು ಹಾಕಿಕೊಂಡ ಆಸ್ತಿ­ಯನ್ನು ಬಿಡುಗಡೆ ಮಾಡಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಬೆಂಗ­ಳೂರು ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸ­ಬೇಕು ಮತ್ತು ಈ ಅರ್ಜಿಯನ್ನು ಕೂಡಲೇ ವಿಚಾರಣೆ ಮಾಡಿ ಆದೇಶ ಹೊರಡಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಸೂಚಿಸಿತ್ತು.

ಆದರೆ ಬೆಂಗಳೂರು ವಿಶೇಷ ನ್ಯಾಯಾ­ಲಯದ ನ್ಯಾಯಾಧೀಶರು ಅರ್ಜಿ­ಯನ್ನು ವಜಾ ಮಾಡಿ ಅರ್ಜಿದಾರರಿಗೆ 10 ಸಾವಿರ ನ್ಯಾಯಾಲಯದ ವೆಚ್ಚ­ಎಂದು ದಂಡ ವಿಧಿಸಿದ್ದಾರೆ. ಮದ್ರಾಸ್‌ ಹೈಕೋರ್ಟ್‌ ಯಾವುದೆ ರೀತಿಯ ಸೂಚನೆ ನೀಡಿಲ್ಲ ಎಂದೂ ಆದೇಶ ಹೊರಡಿಸುವಾಗ ವಿಶೇಷ ನ್ಯಾಯಾ­ಲಯದ ನ್ಯಾಯಾಧೀಶರು ತಿಳಿಸಿದ್ದರು.

ಅರ್ಜಿದಾರರು ಪುನಃ ಮದ್ರಾಸ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಬೆಂಗ­ಳೂರು ವಿಶೇಷ ನ್ಯಾಯಾಲಯ ಹೊರ­ಡಿ­ಸಿದ ಆಜ್ಞೆಯನ್ನು ನ್ಯಾಯಮೂರ್ತಿ­ಗಳ ಗಮನಕ್ಕೆ ತಂದಿದ್ದರು. ಈ ಅರ್ಜಿ ವಿಲೇವಾರಿ ಮಾಡುವಾಗ ನ್ಯಾಯಮೂರ್ತಿ ಎ. ಆರ್ಮುಗಸ್ವಾಮಿ ಅವರು ಬೆಂಗಳೂರು ವಿಶೇಷ ನ್ಯಾಯಾ­ಲಯದ ನ್ಯಾಯಾಧೀಶರ ಧೋರಣೆಯ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

ವಿಶೇಷ ನ್ಯಾಯಾಲಯವು ಯಾವುದೇ ಹೈಕೋರ್ಟ್ ಆಧೀನದಲ್ಲಿರಲಿ, ಒಂದು ಉನ್ನತ ನ್ಯಾಯಾಲಯ ನೀಡಿದ ನಿರ್ದೇ­ಶನ ಪಾಲನೆ ಮಾಡದೆ ಹೋದರೆ ನ್ಯಾಯಾಂಗ ವ್ಯವಸ್ಥೆಯ ಜೇಷ್ಠತೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ. ಅರ್ಜಿದಾರರು ಕರ್ನಾಟಕ ಹೈಕೋ­ರ್ಟ್‌­ನಲ್ಲಿ ಅರ್ಜಿ ಸಲ್ಲಿಸಿ ಬೆಂಗಳೂರು ವಿಶೇಷ ನ್ಯಾಯಾಲಯದ ಆದೇಶದ ಬಗ್ಗೆ ಪರಿಹಾರ ಪಡೆಯ­ಬಹು­ದಾಗಿದೆ ಎಂದು ಮದ್ರಾಸ್‌ ಹೈಕೋರ್ಟ್ ನಿರ್ದೇ­ಶನ ನೀಡಿದೆ.

ಭವಾನಿ ಸಿಂಗ್‌ ಅರ್ಜಿ ವಜಾ
ಅಂತಿಮ ವಾದ ಮಂಡನೆ ವಿಳಂಬ ಮಾಡಿದ ಕಾರಣಕ್ಕೆ ತಮಗೆ ₨ 60 ಸಾವಿರ ದಂಡ ವಿಧಿಸಿದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಎಸ್‌ಪಿಪಿ (ವಿಶೇಷ ಪಬ್ಲಿಕ್‌ ಪ್ರಾಸಿ­ಕ್ಯೂಟರ್‌) ಭವಾನಿ ಸಿಂಗ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ, ಅಕ್ರಮ ಆಸ್ತಿ ಸಂಪಾದಿ­ಸಿ­ದ್ದಾರೆ ಎಂಬ ಪ್ರಕರಣದಲ್ಲಿ ಸಿಂಗ್‌ ತಮಿಳುನಾಡು ಎಸ್‌ಪಿಪಿ ಆಗಿ ನೇಮಕ­ಗೊಂಡಿದ್ದಾರೆ. ಈ ಪ್ರಕರ­ಣದ ವಿಚಾ­ರ­ಣೆಯನ್ನು ಬೆಂಗಳೂರಿನಲ್ಲಿ­ರುವ ವಿಶೇಷ ನ್ಯಾಯಾಲಯ ನಡೆಸುತ್ತಿದೆ.
ಸಿಂಗ್‌ ಅವರು ನಿಗದಿತ ದಿನ ವಾದ ಮಂಡನೆ ಮಾಡಲಿಲ್ಲ ಎಂಬ ಕಾರಣಕ್ಕೆ ವಿಶೇಷ ನ್ಯಾಯಾಲಯವು ದಂಡ ವಿಧಿಸಿ ಮಾರ್ಚ್‌ 14ರಂದು ಆದೇಶಿಸಿದ್ದರು. ಈ ಆದೇಶವನ್ನು ಸಿಂಗ್‌ ಹೈಕೋರ್ಟ್‌­ನಲ್ಲಿ ಪ್ರಶ್ನಿಸಿದ್ದರು. ನ್ಯಾಯಮೂರ್ತಿ ಎಸ್‌.­­ಎನ್‌. ಸತ್ಯನಾರಾಯಣ ವಿಚಾರಣೆ ನಡೆಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.