ADVERTISEMENT

ಮಧ್ಯ­­ಪ್ರದೇಶ ಸಿ.ಎಂ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST
ಮಧ್ಯಪ್ರದೇಶದಲ್ಲಿ ಮಳೆಹಾನಿಯಿಂದ ರೈತರು ಕಂಗೆಟ್ಟಿದ್ದು, ಅವರ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿ ಆ ರಾಜ್ಯದ ಸಂಸದರು, ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌ ಹಾಗೂ ಇತರ ಮುಖಂಡರೊಂದಿಗೆ ರಾಷ್ಟ್ರಪತಿಗಳನ್ನು ಗುರುವಾರ ಭೇಟಿ ಮಾಡಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಮಧ್ಯಪ್ರದೇಶದಲ್ಲಿ ಮಳೆಹಾನಿಯಿಂದ ರೈತರು ಕಂಗೆಟ್ಟಿದ್ದು, ಅವರ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿ ಆ ರಾಜ್ಯದ ಸಂಸದರು, ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌ ಹಾಗೂ ಇತರ ಮುಖಂಡರೊಂದಿಗೆ ರಾಷ್ಟ್ರಪತಿಗಳನ್ನು ಗುರುವಾರ ಭೇಟಿ ಮಾಡಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು   

ಭೋಪಾಲ್‌ (ಪಿಟಿಐ): ಮಳೆಯಿಂದಾಗಿ ಬೆಳೆನಷ್ಟಕ್ಕೀಡಾಗಿರುವ ರೈತರ ಕುರಿತು ಕೇಂದ್ರ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಖಂಡಿಸಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ತಮ್ಮ ಸಂಪುಟದ ಸಚಿವರೊಂದಿಗೆ ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಅಕಾಲಿಕ ಆಲಿಕಲ್ಲು ಮಳೆ­ಯಿಂದ ತತ್ತರಿಸಿರುವ ರೈತರ ಸಮಸ್ಯೆಗಳ ನಿವಾರಣೆಯಲ್ಲಿ ಕೇಂದ್ರ ಸರ್ಕಾರ ತಾರ­ತಮ್ಯ ಎಸಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಗುರುವಾರ ಮಧ್ಯಾಹ್ನ 2 ಗಂಟೆ ತನಕ ಬಂದ್‌ಗೆ ಕರೆ ನೀಡಿತ್ತು. ಬಂದ್‌ಗೆ ಬೆಂಬಲ ಸೂಚಿಸಿ ಮುಖ್ಯಮಂತ್ರಿ ಹಾಗೂ ಸಚಿವರು ನಾಲ್ಕು ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.

ರೈತರ ಸಮಸ್ಯೆಗಳ ನಿವಾರಣೆಗೆ ಕೇಂದ್ರ ಸರ್ಕಾರ ರೂ. 5 ಸಾವಿರ ಕೋಟಿ ಮೊತ್ತದ ವಿಶೇಷ ಪ್ಯಾಕೇಜ್‌ ನೀಡಬೇಕೆಂದು ಒತ್ತಾ­ಯಿಸಿದ ಚೌಹಾಣ್‌, ಸಂಪುಟದ ಎಲ್ಲಾ ಸಚಿವರು ದೆಹಲಿಗೆ ತೆರಳಿಗೆ ಕೇಂದ್ರ ಸರ್ಕಾರಕ್ಕೆ ರಾಜ್ಯದ ರೈತರ ಸ್ಥಿತಿಯನ್ನು ಮನವರಿಕೆ ಮಾಡಿ­ಕೊಡುವುದಾಗಿ ತಿಳಿಸಿದರು.

ಬೆಳೆ ನಷ್ಟದಿಂದ ಸಂಕಷ್ಟಕ್ಕೀಡಾ­ಗಿರುವ ರೈತರಿಗೆ ಈಗಾಗಲೇ ರಾಜ್ಯ ಸರ್ಕಾರ­ದಿಂದ ರೂ. 2 ಸಾವಿರ ಕೋಟಿ ಮೊತ್ತದ ಪರಿಹಾರ ನೀಡುವ ಕುರಿತು ಚಿಂತನೆ ನಡೆಸ­ಲಾಗಿದೆ. ಇದು ಕೇವಲ ಆರಂಭ­ವಷ್ಟೇ. ಎಲ್ಲಾ ರೈತರಿಗೂ ಸೂಕ್ತ ಪರಿಹಾರ ಕಲ್ಪಿಸಲು ನಾವು ಕ್ರಮಗಳನ್ನು ಕೈಗೊಳ್ಳುತ್ತೇವೆ. ಇಲ್ಲಿನ ಹೊಸ ಮಾರು­ಕಟ್ಟೆ ಬಳಿ ರೈತರ ಪರ ಪ್ರತಿಭಟನೆ ನಡೆಸು­ತ್ತಿದ್ದಾಗ ವಿವಿಧ ಸಂಘ–ಸಂಸ್ಥೆಗಳು ಮತ್ತು ಸಾರ್ವಜ­ನಿಕರು ರೂ. 7.42 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

  ಇಂಥ ಸಮಯದಲ್ಲಿ ಪರಿಹಾರ ಒದ­ಗಿಸಲು ‘ಶಾಶ್ವತ ರಾಷ್ಟ್ರೀಯ ಪರಿಹಾರ ವಿಪತ್ತು ನಿಧಿ’  ಸ್ಥಾಪಿಸಬೇಕು ಹಾಗೂ ಸಾರ್ವಜನಿಕರು ‘ಮುಖ್ಯ­ಮಂತ್ರಿ­ಗಳ ಪರಿಹಾರ ನಿಧಿ’ಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ನೀಡ­ಬೇಕೆಂದು ಚೌಹಾಣ್‌ ಕೋರಿದರು.

ಮಳೆಯಿಂದ ಹಾನಿಗೀಡಾದ ಪ್ರದೇಶ­ಗಳಿಗೆ ಭೇಟಿ ನೀಡುವ ವಿಷಯದಲ್ಲಿ ಕಾಂಗ್ರೆಸ್ ಆಸಕ್ತಿ ತೋರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಚೌಹಾಣ್‌, ರೈತರ ಸಂಕಷ್ಟಗಳಿಗೆ ಕಾಂಗ್ರೆಸ್ ನಾಯಕರು ಸೂಕ್ಷ್ಮವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.