ADVERTISEMENT

ಮಹಾರಾಷ್ಟ್ರ ಸರ್ಕಾರದಿಂದ ವಂಚನೆ: ಘಾಯ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ಮುಂಬೈ (ಪಿಟಿಐ): ತಮ್ಮ ಫಿಲಂ ಅಕಾಡೆಮಿಗೆ 20 ಎಕರೆ ಭೂಮಿ ಮಂಜೂರಾತಿಯಲ್ಲಿ ಮಹಾರಾಷ್ಟ್ರ ಸರ್ಕಾರ ವಂಚನೆ ಎಸಗಿದೆ~ ಎಂದು ಬಾಲಿವುಡ್ ನಿರ್ಮಾಪಕ ಸುಭಾಷ್ ಘಾಯ್ ಆರೋಪಿಸಿದ್ದಾರೆ.

ಘಾಯ್ ಅವರಿಗೆ ಮಹಾರಾಷ್ಟ್ರ ಸರ್ಕಾರ ಭೂಮಿ ನೀಡಿರುವುದು ಕಾನೂನು ಬಾಹಿರವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಪ್ರತಿಕ್ರಿಯಿಸಿರುವ ಅವರು, `ಸರ್ಕಾರ ವಂಚನೆ ಮಾಡಿದೆ ಎಂದು ನನಗೆ ಈಗ ಅನಿಸುತ್ತಿದೆ~ ಎಂದಿದ್ದಾರೆ.

ಮುಕ್ತಾ ಆರ್ಟ್ಸ್ ಹಾಗೂ ಮಹಾರಾಷ್ಟ್ರ ಸಿನಿಮಾ, ನಾಟಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ನಿಗಮದ (ಎಂಎಫ್‌ಎಸ್‌ಸಿಡಿಸಿ) ನಡುವೆ ಒಪ್ಪಂದವಾದ ಬಳಿಕವೇ ರೂ 75 ಕೋಟಿ ವೆಚ್ಚದ ಈ ಜಂಟಿ ಯೋಜನೆ ಜಾರಿಯಾಗಿದೆ. 10 ವರ್ಷಗಳ ಬಳಿಕ ಇದು ಅಸಿಂಧುವಾಗಿದ್ದು, ಇದಕ್ಕೆ ಸರ್ಕಾರದ ಲೋಪವೇ ಕಾರಣ ಎಂದಿದ್ದಾರೆ.

`ಈ ಒಪ್ಪಂದವಾದ ಬಗ್ಗೆ ಮಂಡಲಿಯ ಗೊತ್ತುವಳಿಯನ್ನು ಸರ್ಕಾರ ಅಂಗೀಕರಿಸಿಲ್ಲ ಹಾಗೂ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಲಾಗಿದೆ ಎಂದರೆ ಏನರ್ಥ~ ಎಂದು  ಪ್ರಶ್ನಿಸಿದ್ದಾರೆ.

`ಇದರಲ್ಲಿ ನಮ್ಮ ತಪ್ಪು ಯಾವುದು? ಒಪ್ಪಂದದ ಕಾಗದ ಪತ್ರಗಳನ್ನು ಸರ್ಕಾರವೇ ಸಿದ್ಧಪಡಿಸಿದ್ದು, ಅದಕ್ಕೆ ಸಹಿ ಹಾಕಲಾಗಿದೆ. ಸಂಸ್ಕೃತಿ ಸಚಿವರು, ಕಾರ್ಯದರ್ಶಿಗಳ ಷೇರು ಬಂಡವಾಳದೊಂದಿಗೆ ತಮ್ಮ ಸಂಸ್ಥೆ ಆರಂಭಿಕವಾಗಿ 20 ಕೋಟಿ ರೂಪಾಯಿ ವಿನಿಯೋಗಿಸಿದೆ~ ಎಂದು ತಿಳಿಸಿದ್ದಾರೆ.

ಶೇಖರ್ ಕಪೂರ್ ಮತ್ತು ಶಾಂ ಬೆನಗಲ್‌ರಂಥ ಖ್ಯಾತ ಸಿನಿಮಾ ಗಣ್ಯರು ತಮ್ಮ ಬೆಂಬಲಕ್ಕೆ ನಿಂತಿದ್ದು, ಹಗರಣದಲ್ಲಿ ತಮ್ಮ ಸಿನಿಮಾ ಶಾಲೆಯನ್ನು ಎಳೆಯಬಾರದು ಎಂದು ಕೋರಿದರು.

`ಸುಭಾಷ್ ಘಾಯ್ ಅವರು 15 ವರ್ಷಗಳ ಕಾಲ ಶ್ರಮ ವಹಿಸಿ ಸಿನಿಮಾ ಬಗ್ಗೆ ಕಲಿಯಲು ಕೇಂದ್ರ ತೆರೆದಿರುವುದು ಶ್ಲಾಘನೀಯ ಕೆಲಸ. ಅವರ `ವಿಸ್ಲಿಂಗ್ ವುಡ್ಸ್~ ಫಿಲಂ ಅಕಾಡೆಮಿ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ.
 
ಈಗಿನ ಮಾರುಕಟ್ಟೆ ಬೆಲೆಯಲ್ಲಿ ದೇಶದ ಯಾವುದೇ ನಗರದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವುದು ಅಸಾಧ್ಯವಾದ ಮಾತು. ಇದಕ್ಕಾಗಿ ಸರ್ಕಾರವೇ ಭೂಮಿ ಮಂಜೂರು ಮಾಡಬೇಕು. ಸಿಂಗಪುರದಲ್ಲಿ ನಿರ್ಮಿಸಲಾಗಿರುವ ಟಿಶ್ಚ್ ಫಿಲಂ ಸಂಸ್ಥೆಗೆ ಸರ್ಕಾರವೇ ಉಚಿತವಾಗಿ ಭೂಮಿ ನೀಡಿದೆ~ ಎಂದು ಸಿನಿಮಾ ನಿರ್ದೇಶಕ ಶಾಂ ಬೆನಗಲ್ ಅವರು ಹೇಳಿದರು.

`ದೀರ್ಘ ಕಾಲ ಶ್ರಮ ವಹಿಸಿ ಜಗತ್ತಿನಲ್ಲಿ ಎಲ್ಲಿಯೂ ಇರದ ಫಿಲಂ ಶಾಲೆಯನ್ನು ಮುಂಬೈನಲ್ಲಿ ಆರಂಭಿಸಿರುವ ಘಾಯ್, ಎಲ್ಲರ ಪ್ರಶಂಶೆಗೆ ಒಳಗಾಗಿದ್ದಾರೆ. ಆದರೆ ಹಠಾತ್ ಈ ಅಚ್ಚರಿ ಘಟನೆ ಸಂಭವಿಸಿದೆ~ ಎಂದು ಬೆನಗಲ್ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.