ADVERTISEMENT

ಮಹಿಳಾ ವಿಜ್ಞಾ ನಿಗೆ ಲೈಂಗಿಕ ಕಿರುಕುಳ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 19:30 IST
Last Updated 3 ಜನವರಿ 2014, 19:30 IST

ಹೈದರಾಬಾದ್ (ಪಿಟಿಐ): ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ತನಿಖೆಯನ್ನು ಸಮರ್ಪಕವಾಗಿ ನಡೆಸದ ಪ್ರತಿಷ್ಠಿತ ಬೆಳೆ ಸಂಶೋಧನಾ ಕೇಂದ್ರಕ್ಕೆ ಮಹಿಳಾ ವಿಜ್ಞಾನಿಯೊಬ್ಬರು ವಕೀಲರ ಮೂಲಕ ನೋಟಿಸ್‌ ಜಾರಿ ಮಾಡಿದ್ದಾರೆ.

ಹೈದರಾಬಾದ್‌ನ ಬೆಳೆ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವಿಜ್ಞಾನಿ ಮೇಲೆ ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಈ ಸಂಬಂಧ ತಪ್ಪಿತಸ್ಥ ಅಧಿಕಾರಿ ಎಲ್ಲರ ಎದುರು ಸಾರ್ವಜನಿಕ­ವಾಗಿ ಕ್ಷಮೆ ಕೋರಬೇಕು ಎಂದು  ವಿಜ್ಞಾನಿ ಕೇಂದ್ರದ ಆಡಳಿತ ಮಂಡಳಿಗೆ ದೂರು ನೀಡಿದ್ದರು.

ಆದರೆ, ಪ್ರಕರಣದ ತನಿಖೆ ಸಮಯ­ದಲ್ಲಿ ಸಂಸ್ಥೆ ಜಾಣ ಕಿವುಡು ಪ್ರದರ್ಶಿಸಿ, ಪ್ರಕರಣದಿಂದ ಕೈತೊಳೆದುಕೊಂಡಿತ್ತು. ಅಲ್ಲದೇ, ತನಿಖಾ ಸಮಿತಿ ರಚನೆಯಲ್ಲೂ ಕಾನೂನು ಬಾಹಿರ­ವಾಗಿ ನಡೆದು­ಕೊಂಡಿತ್ತು. ದೂರು ನೀಡಿದ ಬಳಿಕವೂ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿ­ಯನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಿ­ರಲಿಲ್ಲ.

ಇದನ್ನು ಪ್ರಶ್ನಿಸಿ  ವಕೀಲರ ಮೂಲಕ ನೋಟಿಸ್ ನೀಡಿದ್ದರು. ನೋಟಿಸ್ ಬಳಿಕ ಎಚ್ಚೆತ್ತುಕೊಂಡ ಕೇಂದ್ರದ ಆಡಳಿತ ಮಂಡಳಿ, ಈ ಬಗ್ಗೆ ಹೊಸದಾಗಿ ದೂರು ದಾಖಲಿಸಿ­ಕೊಂಡು ತನಿಖೆ ನಡೆಸುವುದಾಗಿ ವಿಜ್ಞಾನಿ ಬಳಿ ಮನವಿ ಮಾಡಿದೆ.

ತಪ್ಪಿತಸ್ಥ ಅಧಿಕಾರಿ  ಅವರೆ­­ದುರು ಕ್ಷಮೆ ಕೋರಿದ್ದರು. ಆ ಸಮಯ­ದಲ್ಲಿ ಅದನ್ನು ಅವರು ಒಪ್ಪಿ­ಕೊಂಡಿದ್ದರು. ಹಾಗಾಗಿ, ಪ್ರಕರಣವನ್ನು
ಅಲ್ಲಿಗೇ ಕೈಬಿಡಲಾಗಿತ್ತು ಎಂದು ಆಡಳಿತ ಮಂಡಳಿ ಸಮಜಾಯಿಷಿ ನೀಡಿದೆ.

ಆದರೆ, ಇದನ್ನು ಖಂಡಿಸಿರುವ ದುರ್ಗಾ ಅವರು, ನಾಲ್ಕು ಗೋಡೆಗಳ  ಮುಚ್ಚಿದ ಕೋಣೆಯಲ್ಲಿ ಮೂವರ ವ್ಯಕ್ತಿಗಳ ಮುಂದೆ ಕ್ಷಮೆ ಕೋರಿದರೆ ಅದು ಲೈಂಗಿಕ ದೌರ್ಜನ್ಯಕ್ಕೆ ಸೂಕ್ತ ಪರಿಹಾರ­ವಲ್ಲ. ಈ ಸಂಬಂಧ ಆಡಳಿತ  ಮಂಡಳಿ ಕಾನೂನು ಬದ್ಧವಾಗಿ ಅರ್ಧ­ದಷ್ಟು ಮಹಿಳೆಯರೇ ಇರುವ ಸಮಿತಿ ರಚಿಸಿ ತನಿಖೆ ನಡೆಸಬೇಕಿತ್ತು ಎಂದು ಅವರು ನೋಟಿಸ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.