ADVERTISEMENT

ಮಾಯಾ ಮೇಲೆ ಮೋದಿಗೆ ಮಮತೆ

‘ಬೆಹೆನ್‌ಜೀ’ ಎಂದು ಸಂಬೋಧಿಸಿದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 4 ಮೇ 2019, 20:15 IST
Last Updated 4 ಮೇ 2019, 20:15 IST
ಮಾಯಾವತಿ
ಮಾಯಾವತಿ   

ಲಖನೌ: ಲೋಕಸಭಾ ಚುನಾವಣೆಯ ನಾಲ್ಕು ಹಂತಗಳ ಮತದಾನ ಮುಕ್ತಾಯವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಂತ್ರಗಾರಿಕೆಯನ್ನು ಬದಲಿಸಿಕೊಂಡಂತೆ ಕಾಣಿಸುತ್ತಿದೆ. ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಬಗ್ಗೆ ಅವರು ಮೃದು ಧೋರಣೆ ತಳೆದಿದ್ದಾರೆ.

ಉತ್ತರ ಪ್ರದೇಶದ ಪ್ರತಾಪಗಡದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಶನಿವಾರ ಮಾತನಾಡಿದ ಮೋದಿ, ಮಾಯಾವತಿ ಅವರನ್ನು ‘ಬೆಹನ್‌ಜೀ’ ಎಂದು ಸಂಬೋಧಿಸಿದರು. ‘ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಕಾಂಗ್ರೆಸ್‌ನ ತಂತ್ರಗಾರಿಕೆಯಲ್ಲಿ ಮಾಯಾವತಿ ಸಿಲುಕಿಕೊಂಡಿದ್ದಾರೆ’ ಎಂದೂ ಹೇಳಿದ್ದಾರೆ.

‘ಸಮಾಜವಾದಿ ಪಕ್ಷವು ಮಹಾಘಟಬಂಧನದ ಹೆಸರಿನಲ್ಲಿ ಮಾಯಾವತಿ ಅವರಿಂದ ಲಾಭ ಪಡೆದುಕೊಳ್ಳಲು ಮುಂದಾಗಿದೆ. ಅವರನ್ನು ಕತ್ತಲಲ್ಲಿ ಇರಿಸಲಾಗಿದೆ. ಅವರಿಗೆ ಪ್ರಧಾನಮಂತ್ರಿ ಹುದ್ದೆಯ ಆಸೆ ತೋರಿಸಲಾಗಿದೆ. ಈ ತಂತ್ರಗಾರಿಕೆಯನ್ನು ಮಾಯಾವತಿ ಅರ್ಥ ಮಾಡಿಕೊಳ್ಳಬೇಕು’ ಎಂದು ಮೋದಿ ಹೇಳಿದ್ದಾರೆ.

ADVERTISEMENT

‘ಮಾಯಾವತಿ ಅವರು ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿ ಟೀಕೆ ನಡೆಸುತ್ತಿದ್ದರೆ,ಸಮಾಜವಾದಿ ಪಕ್ಷವು ಕಾಂಗ್ರೆಸ್‌ ಬಗ್ಗೆ ಮೃದು ಧೋರಣೆ ತಳೆದಿದೆ. ಎಸ್‌ಪಿ ರ್‍ಯಾಲಿಯಲ್ಲಿ ಕಾಂಗ್ರೆಸ್ ಮುಖಂಡರು ವೇದಿಕೆ ಹಂಚಿಕೊಳ್ಳುತ್ತಿದ್ದಾರೆ’ ಎಂದು ಮೋದಿ ಹೇಳಿದ್ದಾರೆ.

ರಾಯ್‌ಬರೇಲಿ ಕ್ಷೇತ್ರದಲ್ಲಿ ಎಸ್‌ಪಿ ಶಾಸಕ ಮನೋಜ್‌ ಪಾಂಡೆ, ಸೋನಿಯಾ ಪರವಾಗಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಪ್ರಿಯಾಂಕಾ ಪಾಲ್ಗೊಂಡಿದ್ದನ್ನು ಮೋದಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.