ADVERTISEMENT

ಮಾಲೆಗಾವ್ ಪ್ರಕರಣ: ಸಾಧ್ವಿ ಜಾಮೀನು ಅರ್ಜಿ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 6:10 IST
Last Updated 23 ಸೆಪ್ಟೆಂಬರ್ 2011, 6:10 IST

ನವದೆಹಲಿ, (ಪಿಟಿಐ): ಕಳೆದ 2008ರಲ್ಲಿ ಮಾಲೆಗಾವ್ ನಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಎದುರಿಸುತ್ತಿರುವ ಮೊಕ್ಕಾ ಕಾನೂನು ಅಡಿ ಬಂಧಿತರಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಜಾಮೀನು ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ  ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಗಳಾದ ಜೆ.ಎಂ.ಪಂಚಾಳ್ ಮತ್ತು ಎಚ್.ಜಿ.ಗೋಖಲೆ ಅವರ ವಿಭಾಗೀಯ ಪೀಠ ಅವರ ಜಾಮೀನು ಅರ್ಜಿಯನ್ನು ತಳ್ಳಿಹಾಕಿದೆ.

ಮಹಾರಾಷ್ಟ್ರ ಭಯೋತ್ಪಾದಕ ನಿರೋಧ ಪಡೆ (ಮಹಾರಾಷ್ಟ್ರ ಆಂಟಿ ಟೆರರಿಸ್ಟ್ ಸ್ಕ್ವಾಡ್)ಯು 2008 ಅಕ್ಟೋಬರ್ 23 ರಂದು ತಮ್ಮನ್ನು ಬಂಧಿಸಿದ್ದರೂ 90 ದಿನಗೊಳಳಗಾಗಿ ತಮ್ಮ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ವಿಫಲವಾಗಿದೆ ಎಂದು ಸಾಧ್ವಿ ಅವರ ಜಾಮೀನು ಅರ್ಜಿಯಲ್ಲಿ ಹೇಳಲಾಗಿತ್ತು.

ADVERTISEMENT

ಇದಲ್ಲದೇ, 2008ರ ಅಕ್ಟೋಬರ್ 10ರಿಂದ ತಮ್ಮ ಕಕ್ಷಿದಾರಳನ್ನು ಅಕ್ರಮವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದ ಎಐಟಿಎಸ್, ಕಕ್ಷಿದಾರಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿ ನೀಡಿದೆ, ಹೀಗಾಗಿ  ತಮ್ಮ ಕಕ್ಷಿದಾರಳಿಗೆ ಜಾಮೀನು ನೀಡಬೇಕೆಂದು ಎಂದು  ಸಾಧ್ವಿ ಪರ ವಕೀಲರು ವಾದಿಸಿದ್ದರು.

ಕಳೆದ 2008ರ ಅಕ್ಟೋಬರ್ 23 ರಂದು ಸಾಧ್ವಿ ಅವರನ್ನು ಬಂಧಿಸಿದ ಕೂಡಲೇ ಕಾನೂನಿನ ಪ್ರಕಾರ ಅವರನ್ನು ಮ್ಯಾಜಿಸ್ಟ್ರೇಟ್ ರ ಎದುರು ಹಾಜರು ಪಡಿಸಲಾಗಿತ್ತು ಎಂದು ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿತ್ತು.

ಕಕ್ಷಿದಾರ ಸಾಧ್ವಿ ಮತ್ತು ಸರ್ಕಾರದ ಪರ ವಾದಗಳನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ, ಸೆಪ್ಟೆಂಬರ್ 1 ರಂದು ತನ್ನ ತೀರ್ಮಾನವನ್ನು ನಂತರ ಪ್ರಕಟಿಸುವುದಾಗಿ ತಿಳಿಸಿತ್ತು.

 ಮೊದಲೇ ಕೋಮುಗಲಭೆಗಳಿಗೆ ಹೆಸರಾದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬಟ್ಟೆಗಿರಣಿಗಳ ಮಾಲೆಗಾವ್ ನಲ್ಲಿ, ಕಳೆದ 2008 ಸೆಪ್ಟೆಂಬರ್ 29 ರಂದು ನಡೆದ ಸ್ಫೋಟದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಯ ನಂತರ ಈ ಬಾಂಬ್ ಸ್ಫೋಟದಲ್ಲಿ ಬಲಪಂಥೀಯ ಹಿಂದೂ ಸಂಘಟನೆಗಳ ಕೈವಾಡವಿರುವುದು ಬೆಳಕಿಗೆ ಬಂದಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.