ADVERTISEMENT

ಮಾ.31ರೊಳಗೆ ರಾಜಾ ವಿರುದ್ಧ ಆರೋಪಪಟ್ಟಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ದೂರಸಂಪರ್ಕ ಮಾಜಿ ಸಚಿವ ಎ.ರಾಜಾ ಹಾಗೂ ಎರಡು ಕಂಪೆನಿಗಳ ವಿರುದ್ಧ ಮಾರ್ಚ್ 31ರೊಳಗೆ ಆರೋಪಪಟ್ಟಿ ಸಲ್ಲಿಸುವುದಾಗಿ ಸಿಬಿಐ ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

‘ಟೆಲಿಕಾಂ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು ಸೇರಿದಂತೆ ಇನ್ನೂ ಹಲವು ಕಂಪೆನಿಗಳ ವಿರುದ್ಧವೂ ಆರೋಪಪಟ್ಟಿ ದಾಖಲಿಸಲಿದ್ದೇವೆ. ವಿದೇಶಿ ಹಣ ವಿನಿಮಯ, ಚೆನ್ನೈನಲ್ಲಿ ಟಾಟಾ ಕಂಪೆನಿ ಮತ್ತು ಡಿಎಂಕೆ ಜೊತೆಗಿನ ಭೂಮಿ ಖರೀದಿ ವ್ಯವಹಾರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಸಿಬಿಐ ಪರ ವಕೀಲ ಕೆ.ಕೆ.ವೇಣುಗೋಪಾಲ್ ಅವರು ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಹಾಗೂ ನ್ಯಾಯಮೂರ್ತಿ ಎ.ಕೆ.ಗಂಗೂಲಿ  ಅವರನ್ನೊಳಗೊಂಡ ಪೀಠಕ್ಕೆ ವಿವರಿಸಿದರು.

ಪ್ರತ್ಯೇಕ ಕೋರ್ಟ್: ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಕೋರ್ಟ್ ರಚಿಸಲು ದೆಹಲಿ ಹೈಕೋರ್ಟ್ ಒಪ್ಪಿಗೆ ನೀಡಿದೆ ಎಂಬ ಅಂಶವನ್ನು ವಕೀಲರು ಪೀಠದ ಗಮನಕ್ಕೆ ತಂದರು.

ಚರ್ಚೆ: ದೂರಸಂಪರ್ಕ ಸಚಿವರಾಗಿದ್ದ ಸಮಯದಲ್ಲಿ ರಾಜಾ ಅವರ ಕಾನೂನು ಸಲಹೆಗಾರರಾಗಿದ್ದ ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಅವರನ್ನು ಸಿಬಿಐ ಬುಧವಾರ ಪ್ರಶ್ನೆಗೊಳಪಡಿಸಿತು.

ರಾಜಾ ಅವರ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಜನತಾ ಪಕ್ಷದ ಅಧ್ಯಕ್ಷ ಡಾ.ಸುಬ್ರಮಣಿಯನ್ ಸ್ವಾಮಿ, ರಾಜಾ ಅವರಿಗೆ ವಹನ್ವತಿ ಕಾನೂನು ಸಲಹೆ ನೀಡಿದ್ದರು ಎಂದು ಆರೋಪಿಸಿದ್ದರು. ಆದರೆ ಈ ಹೇಳಿಕೆಯನ್ನು ವಹನ್ವತಿ ಅಲ್ಲಗಳೆದಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.