ADVERTISEMENT

ಮಿತ್ರ ಪಕ್ಷದ ಮುನಿಸು ಶಮನ ಯತ್ನ?

ಮುಂಬೈನಲ್ಲಿ ಉದ್ಧವ್‌ ಠಾಕ್ರೆ ಭೇಟಿಯಾದ ಅಮಿತ್ ಶಾ

ಪಿಟಿಐ
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST
ಮಿತ್ರ ಪಕ್ಷದ ಮುನಿಸು ಶಮನ ಯತ್ನ?
ಮಿತ್ರ ಪಕ್ಷದ ಮುನಿಸು ಶಮನ ಯತ್ನ?   

ಮುಂಬೈ: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ‘ಜನಬೆಂಬಲಕ್ಕಾಗಿ ಸಂಪರ್ಕ’ ಅಭಿಯಾನದ ಭಾಗವಾಗಿ ಉದ್ಯಮಿ ರತನ್‌ ಟಾಟಾ, ಬಾಲಿವುಡ್‌ ತಾರೆ ಮಾಧುರಿ ದೀಕ್ಷಿತ್‌ ಮತ್ತು ಮಿತ್ರ ಪಕ್ಷ ಶಿವಸೇನಾದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನು ಬುಧವಾರ ಭೇಟಿಯಾದರು.

ಬಿಜೆಪಿ ಮತ್ತು ಶಿವಸೇನಾ ನಡುವೆ ಇತ್ತೀಚೆಗೆ ತೀವ್ರ ಭಿನ್ನಮತ ಕಾಣಿಸಿಕೊಂಡಿರುವುದರಿಂದ ಉದ್ಧವ್‌ ಅವರನ್ನು ಶಾ ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ.

ಉದ್ಧವ್‌ ಅವರ ನಿವಾಸಕ್ಕೆ ಭೇಟಿ ಕೊಟ್ಟ ಶಾ ಅವರ ಜತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಇದ್ದರು.

ADVERTISEMENT

ಮುಂದಿನ ಲೋಕಸಭೆ ಚುನಾವಣೆ ಸಿದ್ಧತೆಯ ಅಭಿಯಾನದ ಭಾಗವಾಗಿ ಈ ಭೇಟಿ ನಡೆದಿದೆ. ಇದಕ್ಕೆ ಬೇರೆ ಅರ್ಥ ಇಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ, ಮೇ 28ರಂದು ಪಾಲ್ಘರ್‌ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮಿತ್ರಪಕ್ಷಗಳೆರಡೂ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಪರಸ್ಪರರ ವಿರುದ್ಧ ಭಾರಿ ಪ್ರಚಾರವನ್ನೂ ನಡೆಸಿದ್ದವು.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಬಗ್ಗೆ ಶಿವಸೇನಾ ಹಲವು ಬಾರಿ ಅತೃಪ್ತಿ ವ್ಯಕ್ತಪಡಿಸಿದೆ. ಪಾಲ್ಘರ್‌ ಕ್ಷೇತ್ರದ ಸೋಲಿನ ಬಳಿಕ ‘ಬಿಜೆಪಿ ತನ್ನ ಅತಿ ದೊಡ್ಡ ರಾಜಕೀಯ ವೈರಿ’ ಎಂದು ಸೇನಾ ಹೇಳಿತ್ತು.

ಉದ್ಧವ್‌ ಅವರನ್ನು ಶಾ ಭೇಟಿಯಾಗುತ್ತಿರುವುದು ಯಾಕೆ ಎಂದು ಸೇನಾ ಮಂಗಳವಾರ ಪ್ರಶ್ನಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿಯೇ ಸ್ಪರ್ಧಿಸಲಾಗುವುದು ಎಂದು ಸೇನಾ ಹಲವು ಬಾರಿ ಹೇಳಿದೆ.

‘ಒತ್ತಡ ತಂತ್ರ’

ಸೇನಾ ಮತ್ತು ಬಿಜೆಪಿ ನಡುವೆ ಅಸಮಾಧಾನ ಹೊಗೆಯಾಡುತ್ತಿದೆ ಎಂಬುದನ್ನು ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಶೋಕ್‌ ಚವಾಣ್‌ ಅಲ್ಲಗಳೆದಿದ್ದಾರೆ. ಬಿಜೆಪಿ ಜತೆಗಿನ ಸಂಬಂಧವನ್ನು ಸೇನಾ ಕಡಿದುಕೊಳ್ಳುವ ಸಾಧ್ಯತೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

**

ಬಿಜೆಪಿಯನ್ನು ಶಿವಸೇನಾ ಟೀಕಿಸುತ್ತಿರುವುದು ರಾಜಕೀಯ ಒತ್ತಡ ತಂತ್ರ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯುವುದು ಉದ್ದೇಶ
– ಅಶೋಕ್‌ ಚವಾಣ್‌, ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.