ADVERTISEMENT

ಮೀರಾ ಕುಮಾರ್ ಬರುವ ಮುನ್ನ ಪಟ್ನಾದಿಂದ ತೆರಳಿದ ನಿತೀಶ್ ಕುಮಾರ್

ಪಿಟಿಐ
Published 7 ಜುಲೈ 2017, 11:40 IST
Last Updated 7 ಜುಲೈ 2017, 11:40 IST
ಮೀರಾ ಕುಮಾರ್ (ಸಾಂದರ್ಭಿಕ ಚಿತ್ರ)
ಮೀರಾ ಕುಮಾರ್ (ಸಾಂದರ್ಭಿಕ ಚಿತ್ರ)   

ಪಟ್ನಾ: ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರು ಪ್ರಚಾರಾರ್ಥ ನಗರಕ್ಕೆ ಬರುವ ಕೆಲವೇ ಗಂಟೆಗಳ ಮೊದಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಲ್ಲಿಂದ ನಿರ್ಗಮಿಸಿದ್ದಾರೆ. ಅನಾರೋಗ್ಯದ ನೆಪವೊಡ್ಡಿ ಅವರು ರಾಜ್‌ಗಿರ್‌ಗೆ ತೆರಳಿದ್ದಾರೆ. ಹೀಗಾಗಿ ಮೀರಾ ಅವರನ್ನು ನಿತೀಶ್ ಭೇಟಿಯಾಗುವ ಎಲ್ಲ ಸಾಧ್ಯತೆಗಳು ಕ್ಷೀಣಿಸಿವೆ.

ಬಿಹಾರದ ಆಡಳಿತಾರೂಢ ಮಿತ್ರಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಆರ್‌ಜೆಡಿ ಮೀರಾ ಕುಮಾರ್ ಅವರಿಗೆ ಬೆಂಬಲ ಸೂಚಿಸಿವೆ. ಆದರೆ, ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ಮಾತ್ರ ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರನ್ನು ಬೆಂಬಲಿಸಿದೆ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಿತೀಶ್ ಕುಮಾರ್ ಅವರ ಮೇಲೆ ಕಾಂಗ್ರೆಸ್ ಒತ್ತಡ ಹೇರಿತ್ತು.

ಗುರುವಾರ ಪಟ್ನಾಗೆ ಬಂದಿರುವ ಮೀರಾ ಕುಮಾರ್ ಅವರು ಕಾಂಗ್ರೆಸ್‌ ಮತ್ತು ಆರ್‌ಜೆಡಿ ಶಾಸಕರ ಜತೆ ಸಂವಾದ ನಡೆಸಿದರು. ಮೇವು ಹಗರಣದ ವಿಚಾರಣೆ ಎದುರಿಸಲು ರಾಂಚಿಯ ನ್ಯಾಯಾಲಯಕ್ಕೆ ತೆರಳಿದ್ದರಿಂದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಸಂವಾದದ ವೇಳೆ ಹಾಜರಿರಲಿಲ್ಲ. ಇದಕ್ಕೂ ಮುನ್ನ, ಪಟ್ನಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮೀರಾ ಅವರು, ‘ನಾನು ಬಿಹಾರದ ಮಗಳು. ಬಿಹಾರ ನನ್ನ ಹೃದಯದಲ್ಲಿದೆ’ ಎಂದು ಹೇಳಿದ್ದಾರೆ.

ADVERTISEMENT

ಜುಲೈ 8ರ ವರೆಗೆ ರಾಜ್ಯದಲ್ಲಿರಲಿರುವ ಮೀರಾ ಅವರು, ತಮ್ಮ ಹುಟ್ಟೂರಾದ ಭಿಜ್‌ಪುರ ಜಿಲ್ಲೆಯ ಚಾಂದವಾ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಜತೆಗೆ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.