ADVERTISEMENT

ಮುಂಬೈ ಹಿಂಸೆ: 23 ಮಂದಿ ವಿರುದ್ಧ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

ಮುಂಬೈ (ಐಎಎನ್‌ಎಸ್): ಅಸ್ಸಾಂ ಗಲಭೆ ಖಂಡಿಸಿ ಮುಸ್ಲಿಂ ಸಂಘಟನೆಗಳು ಶನಿವಾರ ಇಲ್ಲಿ ನಡೆಸಿದ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ 23 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಲೆ, ಕೊಲೆಗೆ ಯತ್ನ, ಹಲ್ಲೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಆರೋಪದ ಅಡಿ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಧೀಶ ಪಿ.ಎಸ್. ರಾಠೋಡ್ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ಆಗಸ್ಟ್ 19ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

`ಆಜಾದ್ ಮೈದಾನದ ಹೊರಗಡೆ ಈ ದುರ್ಘಟನೆ ನಡೆದಿರುವುದನ್ನು ನೋಡಿದರೆ  ಇದು ಪೂರ್ವ ನಿಯೋಜಿತ ಮತ್ತು ಪೂರ್ವ ನಿರ್ಧರಿತ ಸಂಚು ಎಂದು ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ ಮಾಹಿತಿಯಲ್ಲಿ ನಮೂದಿಸಿದ್ದಾರೆ~ ಎಂದು ಪ್ರಕರಣದ ಆರೋಪಿ ಪರ ವಕೀಲ ಹುಸೇನ್ ಎ.ಆರ್.  ಶೇಖ್ ತಿಳಿಸಿದ್ದಾರೆ.

ಮ್ಯಾನ್ಮಾರ್ ಮತ್ತು ಅಸ್ಸಾಂನಲ್ಲಿ ನಡೆದ ಮುಸ್ಲಿಂ ಹತ್ಯೆ ಖಂಡಿಸಿ ಕೆಲ ಮುಸ್ಲಿಂ ಸಂಘಟನೆಗಳು ಶನಿವಾರ ಮುಂಬೈನಲ್ಲಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದರು.

`ಘಟನೆ ಕುರಿತು ಸಂಪೂರ್ಣ ತನಿಖೆಗಾಗಿ ನಾವು ವಿಶೇಷ ತಂಡವನ್ನು ರಚಿಸಿದ್ದು, ಇದರ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗುವುದು~ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಹಿಮಾಂಶು ರಾಯ್ ಸುದ್ದಿಗಾರರಿಗೆ ತಿಳಿಸಿದರು. `ಗಲಭೆ ನಡೆಸಿದವರ ಚಿತ್ರ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅವರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆದಿದೆ~ ಎಂದು ಅವರು ಹೇಳಿದರು.

`ಸಾರ್ವಜನಿಕ ಮತ್ತು ಖಾಸಗಿ ವ್ಯಕ್ತಿಗಳ ಆಸ್ತಿ ಹಾನಿ ಬಗ್ಗೆ ಅಂದಾಜು  ಮಾಡಲಾಗುತ್ತಿದೆ. ಕಾನೂನು ಪ್ರಕಾರ ನಷ್ಟ ಭರ್ತಿಯನ್ನು ಪ್ರತಿಭಟನೆ ಆಯೋಜಕರೇ ಭರಿಸಬೇಕು~ ಎಂದರು.

ಕ್ಷಮೆ ಕೋರಿದ ರಜಾ ಅಕಾಡೆಮಿ
ಮುಂಬೈ (ಐಎಎನ್‌ಎಸ್):
ಅಸ್ಸಾಂ ಕೋಮು ಗಲಭೆ ಖಂಡಿಸಿ ಶನಿವಾರ ತಾನು ಕರೆ ನೀಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ರಜಾ ಅಕಾಡೆಮಿ ಭಾನುವಾರ ಮಾಧ್ಯಮಗಳು, ಮುಂಬೈ ನಿವಾಸಿಗಳ ಕ್ಷಮೆ ಕೋರಿದೆ.

`ಹಿಂಸಾಚಾರ ನಡೆಸಿದವರು ಮುಸ್ಲಿಮರಾಗುವುದಕ್ಕೆ ಸಾಧ್ಯವೇ ಇಲ್ಲ. ರಂಜಾನ್ ಉಪವಾಸದ ಸಂದರ್ಭದಲ್ಲಿ ಯಾವುದೇ ಮುಸ್ಲಿಮರು ಇಂಥ ಹಿಂಸಾಚಾರ ನಡೆಸಲು ಧೈರ್ಯ ಮಾಡುವುದಿಲ್ಲ. ಕೆಲವು ಕಿಡಿಗೇಡಿಗಳು ಪರಿಸ್ಥಿತಿಯ ಲಾಭ ಪಡೆದಿದ್ದಾರೆ~ ಎಂದು ರಜಾ ಅಕಾಡೆಮಿ ಅಧ್ಯಕ್ಷ ಮೊಹಮ್ಮದ್ ಸಯೀದ್ ನೂರಿ ತಿಳಿಸಿದ್ದಾರೆ.

ಸಂಘಟನೆಗಳ ಖಂಡನೆ:  `ಈ ಘಟನೆ ಅತ್ಯಂತ ಹೀನ ಕೃತ್ಯ~ ಎಂದು ರಜಾ ಅಕಾಡೆಮಿ, ಆಲ್ ಇಂಡಿಯಾ ಸುನ್ನಿ ಜಮೈತುಲ್ ಉಲೇಂ, ಆಲ್ ಇಂಡಿಯಾ ಸುನ್ನಿ ಅಯೆಮಾ-ಎ- ಮಸ್ಜಿದ್, ಜಮಾತ್-ಎ- ರಜಾ ಮುಸ್ತಫಾ ಮತ್ತು ಇತರ 20 ಸುನ್ನಿ ಮುಸ್ಲಿಂ ಸಂಘಟನೆಗಳ ಒಕ್ಕೂಟಗಳು ಹೇಳಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT