ADVERTISEMENT

ಮುಖ ಪರದೆ ನಿಷೇಧಿಸಿದ್ದಕ್ಕೆ ಜೀವ ಬೆದರಿಕೆ

ಮುಸ್ಲಿಂ ಎಜುಕೇಷನಲ್‌ ಸೊಸೈಟಿಯ ಶಿಕ್ಷಣ ಸಂಸ್ಥೆಗಳಲ್ಲಿ ನಿಯಮ

​ಪ್ರಜಾವಾಣಿ ವಾರ್ತೆ
Published 4 ಮೇ 2019, 18:39 IST
Last Updated 4 ಮೇ 2019, 18:39 IST
   

ತಿರುವನಂತಪುರ: ಕೇರಳದ ಮುಸ್ಲಿಂ ಎಜುಕೇಷನಲ್‌ ಸೊಸೈಟಿಯ (ಎಂಇಎಸ್‌) ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಮುಖ ಮುಚ್ಚಿಕೊಳ್ಳುವ ದುಪಟ್ಟಾ ಅಥವಾ ಮುಖ ಪರದೆ ಧರಿಸಿ ಬರುವುದನ್ನು ನಿಷೇಧಿಸುವುದಾಗಿ ಘೋಷಿಸಿದ್ದಕ್ಕೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಎಂಇಎಸ್‌ ಅಧ್ಯಕ್ಷ ಡಾ. ಪಿ.ಎ. ಫಜಲ್‌ ಗಫೂರ್‌ ದೂರಿದ್ದಾರೆ.

ಕೊಯಿಕ್ಕೋಡ್‌ನ ನಡಕ್ಕವು ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘ಮುಖ ಪರದೆ ಧರಿಸಿ ಬರುವುದನ್ನುನಿಷೇಧಿಸುವುದಾಗಿ ಘೋಷಿಸಿದಾಗಿನಿಂದ, ಕೊಲ್ಲಿ ರಾಷ್ಟ್ರಗಳಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ನನ್ನ ವಿರುದ್ಧ ಟೀಕೆಗಳು ಬರುತ್ತಿವೆ. ನಿರ್ಧಾರ ಹಿಂಪಡೆಯುವಂತೆ ನನ್ನ ಮೇಲೆ ಒತ್ತಡ ಹಾಕಲಾಗುತ್ತಿದೆ. ಅಲ್ಲದೆ, ನನ್ನ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪುಟ ಸೃಷ್ಟಿಸಿಲಾಗಿದೆ’ ಎಂದು ಗಫೂರ್‌ ದೂರಿನಲ್ಲಿ ಹೇಳಿದ್ದಾರೆ.

ADVERTISEMENT

ಎಂಇಎಸ್‌ ಸಂಸ್ಥೆಯ ಈ ನಿರ್ಧಾರವನ್ನು ಕೇರಳದ ಪ್ರಮುಖ ಮುಸ್ಲಿಂ ಸಂಘಟನೆ ಸಂಸ್ಥಾ ಕೇರಳ ಜಾಮಿಯಾತ್ತುಲ್‌ ಉಲೇಮಾ ತೀವ್ರವಾಗಿ ಖಂಡಿಸಿತ್ತು. ಆದರೆ, ಪ್ರಮುಖ ರಾಜಕೀಯ ಪಕ್ಷಗಳು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮುಖ ಪರದೆ ಮತ್ತು ಪೂರ್ಣತೋಳಿನ ಶರ್ಟ್‌ ಧರಿಸಿ ಬರಲು ಅನುಮತಿ ನೀಡುವಂತೆ ಕೋರಿ ಕ್ರಿಶ್ಚಿಯನ್‌ ಶೈಕ್ಷಣಿಕ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು 2018ರ ಡಿಸೆಂಬರ್‌ನಲ್ಲಿ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದರು. ವಿದ್ಯಾರ್ಥಿಗಳ ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್‌, ಶಾಲಾ ಸಮವಸ್ತ್ರ ಧರಿಸಿ ಬರುವಂತೆ ಸೂಚಿಸಿತ್ತು. ಈ ಆದೇಶವನ್ನು ಆಧಾರವಾಗಿಟ್ಟುಕೊಂಡೇ ಎಂಇಎಸ್‌ ಕೂಡ, ವಿದ್ಯಾರ್ಥಿಗಳು ಮುಖ ಪರದೆ ಧರಿಸಿ ಬರುವುದನ್ನು ನಿಷೇಧಿಸುವ ನಿರ್ಧಾರ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.