ADVERTISEMENT

ಮುಗಿಯದ ಮುನಿಸು

ಮೋದಿ ಆಯ್ಕೆ: ಮನವೊಲಿಕೆಗೆ ಮಣಿಯದ ಅಡ್ವಾಣಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 20:09 IST
Last Updated 14 ಸೆಪ್ಟೆಂಬರ್ 2013, 20:09 IST
ಮುಗಿಯದ ಮುನಿಸು
ಮುಗಿಯದ ಮುನಿಸು   

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ `ಬಿಜೆಪಿ ಪ್ರಧಾನಿ ಅಭ್ಯರ್ಥಿ' ಪಟ್ಟ ಕಟ್ಟಿರುವುದರಿಂದ ಮುನಿಸಿಕೊಂಡಿರುವ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಮನ­ವೊಲಿಸಲು ಶನಿವಾರವೂ ಮುಂದುವರಿದ ಪ್ರಯತ್ನ ಯಾವುದೇ ಫಲ ನೀಡಲಿಲ್ಲ.

ಮೋದಿ ಅವರನ್ನು ವಿರೋಧಿಸಿ ಏಕಾಂಗಿ­ಯಾಗಿರುವ ಅಡ್ವಾಣಿ ಅಸಮಾಧಾನ ಇನ್ನೂ ಶಮನವಾಗಿಲ್ಲ. ಪಕ್ಷದ ತೀರ್ಮಾನ ಕುರಿತು ಅವರು ಕಿಡಿ ಕಾರುತ್ತಿ­ದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ನಾಯಕರಾದ ಸುಷ್ಮಾ ಸ್ವರಾಜ್, ಅನಂತ ಕುಮಾರ್, ಬಲಬೀರ್ ಪುಂಜ್ ಶನಿವಾರ ಅಡ್ವಾಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸುಷ್ಮಾ, ‘ಮೋದಿ ನೇಮಕ ಕುರಿತು ಪಕ್ಷದೊಳಗೆ ಯಾರೂ ಹತಾಶ­ರಾಗಿಲ್ಲ’ ಎಂದು ಸ್ಪಷ್ಟಪಡಿಸಿದರು. ರಾಜನಾಥ್‌ಸಿಂಗ್ ಅವರಿಗೆ ಅಡ್ವಾಣಿ ಶುಕ್ರವಾರ ಬರೆದ ಪತ್ರದ ಬಗ್ಗೆ ಚರ್ಚೆ ನಡೆಯಲಿಲ್ಲ ಎಂದರು.

ಸಂಸದೀಯ ಮಂಡಳಿ ತಮ್ಮನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ  ಬಳಿಕ ಮೋದಿ ಅವರು ಅಡ್ವಾಣಿ ಮನೆಗೆ ಭೇಟಿ ಕೊಟ್ಟು ಸುಮಾರು 30 ನಿಮಿಷ ಹಿರಿಯ ನಾಯ­ಕನ ಜತೆಗಿದ್ದರು. ಇದಕ್ಕೆ ಮೊದಲೇ ರವಾನಿಸಿದ ಪತ್ರದಲ್ಲಿ ರಾಜನಾಥ್ ಸಿಂಗ್ ಅವರನ್ನು ಮಾತ್ರ ತರಾಟೆಗೆ ತೆಗೆದುಕೊಂಡಿರುವ ಅಡ್ವಾಣಿ, ಎಲ್ಲೂ ಮೋದಿ ಬಗ್ಗೆ ಪ್ರಸ್ತಾಪಿಸಿರಲಿಲ್ಲ.

ಆರ್‌ಎಸ್‌ಎಸ್‌ ಸಾಂಸ್ಕೃತಿಕ ಸಂಘಟನೆಯೇ?: ‘ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಸತತ ಒತ್ತಡ ಹೇರಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈಗಲೂ ಸಾಂಸ್ಕೃತಿಕ ಸಂಘ­ಟನೆಯೇ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯ­ದರ್ಶಿ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.

‘ವಿನಾಶ ಕಾಲೇ ವಿಪರೀತ ಬುದ್ಧಿ’
ಪಟ್ನಾ (ಪಿಟಿಐ/ಐಎಎನ್‌ಎಸ್‌):))) ‘ಬಿಜೆಪಿ ವಿನಾ­ಶದ ಹಾದಿ­ಯಲ್ಲಿದೆ ಮತ್ತು ದೇಶವು ವಿಚ್ಛಿದ್ರ­ಕಾರಿ ಮುಖಂಡ­ರನ್ನು ಸಹಿಸಿ­ಕೊಳ್ಳುವುದಿಲ್ಲ’ ಎಂದು ಜೆಡಿಯು ನಾಯಕ, ಬಿಹಾ­ರ ಮುಖ್ಯ­ಮಂತ್ರಿ ನಿತೀಶ್‌ ಕುಮಾರ್‌ ಶನಿವಾರ ಇಲ್ಲಿ ಹೇಳಿದರು.

ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಪ್ರಕಟಿಸಿರುವು­ದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು,  ಇದು ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬಂ­ತಾ­ಗಿದೆ ಎಂದರು.

ಪಾಸ್ವಾನ್‌ ಟೀಕೆ:  ಈ ಮಧ್ಯೆ, ಆರ್‌ಎಸ್‌ಎಸ್‌ ಒತ್ತಡ­ದಿಂದ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ­ದ್ದನ್ನು ಟೀಕಿಸಿರುವ ಎಲ್‌ಜೆಪಿ ನಾಯಕ ರಾಮ್‌ವಿಲಾಸ್‌ ಪಾಸ್ವಾನ್‌, ಆ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ಎಚ್‌.ಡಿ. ದೇವೇಗೌಡ: ಈ ದೇಶದ ಪ್ರಧಾನಿ ಯಾರಾಗಬೇಕು ಎಂಬುದನ್ನು ಬಿಜೆಪಿ ಅಥವಾ ಆರ್‌ಎಸ್‌ಎಸ್‌ನಿಂದ ನಿರ್ಧರಿಸಲು ಸಾಧ್ಯವಿಲ್ಲ. ಅದನ್ನು ದೇಶದ ಮತದಾರರು ತೀರ್ಮಾನ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT