ADVERTISEMENT

ಮುಸ್ಲಿಂ ಮಕ್ಕಳ ದಾಖಲಾತಿಯಲ್ಲಿ ಇಳಿಕೆ: ಕೋಲಾಹಲ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ದೆಹಲಿಯ ಖಾಸಗಿ ಶಾಲೆಗಳಲ್ಲಿ ಮುಸ್ಲಿಂ ಮಕ್ಕಳ ದಾಖಲಾತಿಯಲ್ಲಿ ಇಳಿಕೆ ಕಾಣಿಸಿಕೊಂಡಿದೆ ಎಂಬ ವಿಚಾರ ರಾಜ್ಯಸಭೆಯಲ್ಲಿ ಸೋಮವಾರ ಕೋಲಾಹಲಕ್ಕೆ ಕಾರಣವಾಯಿತು.
ಈ ವಿಷಯಕ್ಕೆ ಸಂಬಂಧಿಸಿ ಬಿಜೆಪಿ, ಎಲ್‌ಜೆಪಿ ಹಾಗೂ ಎನ್‌ಸಿಪಿ ಸದಸ್ಯರು ವಾಗ್ವಾದದಲ್ಲಿ ತೊಡಗಿಕೊಂಡು ಗದ್ದಲ ಎಬ್ಬಿಸಿದರು.

ಎಲ್‌ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಶೂನ್ಯ ವೇಳೆಯಲ್ಲಿ ಪತ್ರಿಕೆಯೊಂದನ್ನು ತೋರಿಸಿ ದೆಹಲಿಯ ಖಾಸಗಿ ಶಾಲೆಗಳಲ್ಲಿ ಮುಸ್ಲಿಂ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ ಎನ್ನುವ ವರದಿಯತ್ತ ಗಮನ ಸೆಳೆದರು.
ಕೂಡಲೇ ಎದ್ದು ನಿಂತ ಬಿಜೆಪಿ ಸದಸ್ಯ ಬಲ್‌ಬೀರ್ ಪುಂಜ್ ಶಾಲಾ ದಾಖಲಾತಿಯಂತಹ ವಿಚಾರದಲ್ಲೂ ಧರ್ಮವನ್ನು ತರುವುದು ಸರಿಯಲ್ಲ ಎಂದು ಖಂಡಿಸಿದರು. ಎನ್‌ಸಿಪಿಯ ತಾರೀಕ್ ಅನ್ವರ್, ಪಾಸ್ವಾನ್ ಅವರನ್ನು ಬೆಂಬಲಿಸಿದರು.

ತಮಗೆ ಈ ವಿಚಾರದಲ್ಲಿ ಮಾತನಾಡಲು ಹೆಚ್ಚು ಕಾಲಾವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಸಭಾಧ್ಯಕ್ಷರ ಪೀಠದಲ್ಲಿದ್ದ ಪಿ.ಜೆ. ಕುರಿಯನ್ ಕಾಂಗ್ರೆಸ್‌ಗೆ ಸೇರಿದ ವ್ಯಕ್ತಿ ಎಂದು ಪಾಸ್ವಾನ್ ನಿಂದಿಸಿದರು.

ಸಭಾಧ್ಯಕ್ಷರ ಪೀಠ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ನಿಂದಾತ್ಮಕ ಮಾತುಗಳನ್ನು ವಾಪಸು ಪಡೆಯಿರಿ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ತಾವು ಅಂತಹ ಟೀಕೆ ಮಾಡಿಲ್ಲ ಎಂದು ಪಾಸ್ವಾನ್ ಆನಂತರ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.