ADVERTISEMENT

ಮೂಲವೇತನಕ್ಕೆ ಭತ್ಯೆಗಳ ಸೇರ್ಪಡೆ- ಸಮಿತಿಯ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 19:59 IST
Last Updated 19 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ನೌಕರರಿಗೆ ನೀಡುವ ವಿವಿಧ ಭತ್ಯೆಗಳನ್ನು ಮೂಲವೇತನಕ್ಕೆ ಸೇರಿಸಿದಾಗ ಬರುವ ಮೊತ್ತವನ್ನು ಭವಿಷ್ಯ ನಿಧಿಯಾಗಿ (ಪಿಎಫ್) ಕಡಿತ ಮಾಡಬೇಕೆಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸಲ್ಲಿಸಿದ್ದಪ್ರಸ್ತಾವವನ್ನು ಪರಿಶೀಲನಾ ಸಮಿತಿ ಅನುಮೋದಿಸಿದೆ.

ಇದು ಜಾರಿಗೆ ಬಂದರೆ ನೌಕರರ ಕೈಗೆ ಸಿಗುವ ವೇತನ ಕಡಿಮೆ ಆಗುತ್ತದೆಯಾದರೂ, ಮಾಸಿಕ ಉಳಿತಾಯ ಹೆಚ್ಚುತ್ತದೆ.  ಇದರಿಂದ 5 ಕೋಟಿಗೂ ಹೆಚ್ಚು ಖಾತೆದಾರರಿಗೆ ಅನುಕೂಲವಾಗುತ್ತದೆ ಎನ್ನಲಾಗಿದೆ.

ಈ ಪ್ರಸ್ತಾವದ ಸಾಧಕ ಬಾಧಕಗಳ ಕುರಿತು ಪರಿಶೀಲಿಸಲು ರಚಿಸಲಾಗಿದ್ದ ಪರಿಶೀಲನಾ ಸಮಿತಿಯು, ಸಾಮಾಜಿಕ ಭದ್ರತೆಹೆಚ್ಚಿಸುವ ಉದ್ದೇಶ ಹೊಂದಿದ ಇಪಿಎಫ್‌ಒ ಚಿಂತನೆಗೆ ಬೆಂಬಲ ವ್ಯಕ್ತಪಡಿಸಿದೆ.

ಕಾರ್ಮಿಕ ಸಚಿವಾಲಯವು ಸಮಿತಿಯ ವರದಿಯನ್ನು ಅಧ್ಯಯನ ಮಾಡಿ ಟ್ರಸ್ಟಿಗಳ ಕೇಂದ್ರ ಮಂಡಳಿ (ಸಿಬಿಟಿ) ಮುಂದಿಡಲಿದೆ. ನಂತರ ಸಿಬಿಟಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಟ್ರಸ್ಟಿಯೂ ಆದ ಭಾರತೀಯ ಮಜ್ದೂರ್ ಸಂಘದ ಕಾರ್ಯದರ್ಶಿ ಬಿ.ಎನ್.ರಾಯ್ ಸುದ್ದಿಸಂಸ್ಥೆಗೆ ತಿಳಿಸಿದರು.

ನೌಕರರಿಗೆ ನಿಯಮಿತವಾಗಿ ಮತ್ತು ಏಕಪ್ರಕಾರವಾಗಿ ನೀಡುವ ಎಲ್ಲಾ ಭತ್ಯೆಗಳನ್ನೂ ಮೂಲವೇತನಕ್ಕೆ ಸೇರಿಸುವ ಪ್ರಸ್ತಾವವನ್ನು ಮಾಲೀಕರ ಪ್ರತಿನಿಧಿಗಳಿಂದ ಕೂಡ ಬೆಂಬಲ ವ್ಯಕ್ತವಾಗಿದೆ ಎಂದು ಪರಿಶೀಲನಾ ಸಮಿತಿಯ ಸದಸ್ಯ ರಾಯ್ ತಿಳಿಸಿದ್ದಾರೆ.

ಈ ಹಿಂದಿನ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತ ಆರ್.ಸಿ.ಮಿಶ್ರಾ ಅವರು ತಮ್ಮ ನಿವೃತ್ತಿಯ ಕಡೆಯ ದಿನದಂದು (ನ.30), ನಿಯಮಿತವಾಗಿ ನೀಡುವ ವಿವಿಧ ಭತ್ಯೆಗಳನ್ನು ಮೂಲವೇತನಕ್ಕೆ ಸೇರಿಸಬೇಕು ಎಂದು ಅಧಿಸೂಚನೆ ಹೊರಡಿಸಿದ್ದರು. ಆದರೆ ಈ ಅಧಿಸೂಚನೆಗೆ ವಿರೋಧ ವ್ಯಕ್ತವಾಗಿದ್ದರಿಂದ, ಸರ್ಕಾರ ಈ ಕುರಿತು ಪರಿಶೀಲಿಸಲು ಸರ್ಕಾರ ಸಮಿತಿ ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.