ADVERTISEMENT

ಮೂವರು ಲಷ್ಕರ್ ಉಗ್ರರ ಹತ್ಯೆ

ಶ್ರೀನಗರದ ಹೊರವಲಯದಲ್ಲಿ ಭದ್ರತಾ ಪಡೆಯಿಂದ ನಾಲ್ಕು ತಾಸು ಕಾರ್ಯಾಚರಣೆ

ಪಿಟಿಐ
Published 5 ಮೇ 2018, 19:45 IST
Last Updated 5 ಮೇ 2018, 19:45 IST
ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಿಂದ ಹಾನಿಗೊಳಗಾದ ಮನೆಯೊಂದರಿಂದ ವ್ಯಕ್ತಿಯೊಬ್ಬರು ಇಣುಕಿ ನೋಡಿದರು –ಪಿಟಿಐ ಚಿತ್ರ
ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಿಂದ ಹಾನಿಗೊಳಗಾದ ಮನೆಯೊಂದರಿಂದ ವ್ಯಕ್ತಿಯೊಬ್ಬರು ಇಣುಕಿ ನೋಡಿದರು –ಪಿಟಿಐ ಚಿತ್ರ   

ಶ್ರೀನಗರ: ಶ್ರೀನಗರದ ಹೊರವಲಯ ಛಟ್ಟಾಬಾಲ್‌ ಪ್ರದೇಶದ ನಿರ್ಮಾಣ ಹಂತದ ಕಟ್ಟದಲ್ಲಿ ಅಡಗಿದ್ದ ಲಷ್ಕರ್ ಎ ತಯಬಾದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಿವೆ.

ಮೇ 7ರಂದು ಸರ್ಕಾರಿ ಕಚೇರಿಗಳು ಜಮ್ಮುವಿನಿಂದ ಶ್ರೀನಗರಕ್ಕೆ ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

ಉಗ್ರರು ಅಡಗಿದ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಶನಿವಾರ ಬೆಳಗಿನ ಜಾವ ದಾಳಿ ನಡೆಸಿದರು. ಸುಮಾರು ನಾಲ್ಕು ತಾಸುಗಳ ಕಾರ್ಯಾಚರಣೆ ನಂತರ ಮೂವರು ಉಗ್ರರನ್ನು ಹೊಡೆದು ಉರುಳಿಸಿದ್ದಾರೆ.

ADVERTISEMENT

ಗುಂಡಿನ ಕಾಳಗದಲ್ಲಿ ನಾಲ್ವರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದು, ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

**

ಪಾಕ್‌ನಿಂದ ನುಸುಳಿದ ಉಗ್ರರು?

ಭದ್ರತಾ ಸಿಬ್ಬಂದಿ ಗುಂಡಿನ ಚಕಮಕಿಯಲ್ಲಿ ಹತರಾದ ಮೂವರು ಉಗ್ರರಲ್ಲಿ ಇಬ್ಬರು ನೆರೆಯ ಪಾಕಿಸ್ತಾನದಿಂದ ನುಸುಳಿ ಬಂದಿರಬೇಕು ಎಂದು ಶಂಕಿಸಲಾಗಿದೆ.

ಗಡಿಯಿಂದ ಒಳನುಸುಳುವ ವೇಳೆ ತೀವ್ರ ಶೀತಗಾಳಿ ಮತ್ತು ಹಿಮದ ಹೊಡೆತಕ್ಕೆ ಸಿಲುಕಿ ಈ ಉಗ್ರರು ತೀವ್ರವಾಗಿ ಗಾಯಗೊಂಡಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಮೂರನೇ ಉಗ್ರ ಸ್ಥಳೀಯನಾಗಿದ್ದು, ಆತನನ್ನು ಫಯಾಜ್ ಅಹ್ಮದ್ ಹಮ್ಮಲ್ ಎಂದು ಗುರುತಿಸಲಾಗಿದೆ. ಈತ ಶಸ್ತ್ರಾಸ್ತ್ರ ಅಪಹರಣ ಹಾಗೂ ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಲ್ಲುತೂರಾಟದಲ್ಲಿ ಸಕ್ರಿಯನಾಗಿದ್ದ ಈತನಿಗೆ ಪಾಕಿಸ್ತಾನದಿಂದ ಉಗ್ರರನ್ನು ಕರೆತರುವ ಕೆಲಸ ವಹಿಸಲಾಗಿತ್ತು ಎನ್ನುವ ಶಂಕೆ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.