ADVERTISEMENT

ಮೂವರು ಶಾಸಕರು ನಿರ್ದೋಷಿ

ಹಲ್ಲೆ ಪ್ರಕರಣ: ಸದನ ಸಮಿತಿ ತನಿಖಾ ವರದಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ಮುಂಬೈ (ಪಿಟಿಐ): ಎಎಸ್‌ಐ ಮೇಲೆ ಹಲ್ಲೆ ಪ್ರಕರಣದ ತನಿಖೆಗೆ ರಚಿಸಲಾಗಿದ್ದ ಸದನ ಸಮಿತಿಯು, ಹಲ್ಲೆಗೊಳಗಾದ ಎಎಸ್‌ಐ ವಿರುದ್ಧ ಇಲಾಖಾ ವಿಚಾರಣೆಗೆ ಶಿಫಾರಸು ಮಾಡಿದೆ. ಜೊತೆಗೆ ಸದನದಿಂದ ಅಮಾನತುಗೊಂಡಿದ್ದ ಐವರು ಆಪಾದಿತ ಶಾಸಕರಲ್ಲಿ ಮೂವರನ್ನು ನಿರ್ದೋಷಿ ಎಂದಿದ್ದು, ಅವರ ಅಮಾನತನ್ನು ತೆರವುಗೊಳಿಸಲು ಶಿಫಾರಸು ಮಾಡಿದೆ.

ಶಾಸಕ ಗಣಪತ್‌ರಾವ್ ದೇಶಮುಖ್ ನೇತೃತ್ವದ ಸಮಿತಿ ಸಲ್ಲಿಸಿದ ವರದಿಯನ್ನು ಸ್ಪೀಕರ್ ದಿಲೀಪ್ ವಾಲ್ಸೆ ಪಾಟೀಲ್ ಗುರುವಾರ ಸದನದಲ್ಲಿ ಓದಿದರು.
`ಸಂಚಾರ ಪೊಲೀಸ್ ವಿಭಾಗದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಸಚಿನ್ ಸೂರ್ಯವಂಶಿ ಅವರು (ಸದ್ಯ ಅಮಾನತುಗೊಂಡಿದ್ದಾರೆ) ಬಾಂದ್ರಾ- ವರ್ಲಿ ಸಂಪರ್ಕ ರಸ್ತೆಯಲ್ಲಿ ಮಾರ್ಚ್ 18ರಂದು ಶಾಸಕ ಕ್ಷಿತಿಜ್ ಠಾಕೂರ್ ಅವರೊಂದಿಗೆ `ಆಕ್ಷೇಪಾರ್ಹ' ರೀತಿಯಲ್ಲಿ ವರ್ತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಇಲಾಖಾ ವಿಚಾರಣೆಗೆ ಶಿಫಾರಸು ಮಾಡಲಾಗಿದೆ' ಎಂದರು.

ವಿಧಾನ ಭವನದ ಆವರಣದಲ್ಲಿ ಎಎಸ್‌ಐ ಸೂರ‌್ಯವಂಶಿ ಮೇಲೆ  ಮಾರ್ಚ್ 19ರಂದು ಹಲ್ಲೆ ನಡೆದಿರುವುದು ನಿಜ ಎಂದು ವರದಿಯಲ್ಲಿ ಒಪ್ಪಲಾಗಿದೆ. ಆದರೆ, ಇದರಿಂದ ಸೂರ‌್ಯವಂಶಿ ಅವರಿಗೆ ಗಂಭೀರ ಸ್ವರೂಪದ ಗಾಯಗಳೇನೂ ಆಗಿಲ್ಲ ಎಂದೂ ವರದಿ ಹೇಳಿದೆ.

ಈ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆಪಾದಿಸಲಾದ ಐವರು ಶಾಸಕರಲ್ಲಿ ರಾಜನ್ ಸಾಳ್ವಿ (ಶಿವಸೇನೆ), ಪ್ರದೀಪ್ ಜೈಸ್ವಾಲ್ (ಪಕ್ಷೇತರ), ಜೈಕುಮಾರ್ ರಾವಲ್ (ಬಿಜೆಪಿ) ಅವರ ವಿರುದ್ಧ ಸಾಕ್ಷ್ಯಗಳು ಇಲ್ಲವಾದ ಕಾರಣ ಅವರು ನಿರ್ದೋಷಿಗಳು. ಅವರನ್ನು ಸದನದಿಂದ ಅಮಾನತು ಮಾಡಿದ್ದ ಆದೇಶವನ್ನು ಈ ಅಧಿವೇಶನದಿಂದಲೇ ತೆರವುಗೊಳಿಸಲು ಸಮಿತಿ ಶಿಫಾರಸು ಮಾಡಿದೆ.

ಇನ್ನಿಬ್ಬರು ಆರೋಪಿ ಶಾಸಕರಾದ ಕ್ಷಿತಿಜ್ ಠಾಕೂರ್ ಮತ್ತು ರಾಮ್ ಕದಂ ಅವರು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿರುವ ಸಮಿತಿಯು, ಈ ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇವರ ಅಮಾನತು ಆದೇಶವನ್ನು ಮಳೆಗಾಲ ಅಧಿವೇಶನದ ಮೊದಲ ವಾರದಲ್ಲಿ ತೆರವುಗೊಳಿಸಬಹುದು ಎಂದಿದೆ.

ಜನಪ್ರತಿನಿಧಿಗಳೊಂದಿಗೆ ಸರ್ಕಾರಿ ಅಧಿಕಾರಿಗಳ ವರ್ತನೆ ಕುರಿತು ಪರಿಶೀಲಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿಯನ್ನು ರಚಿಸಬೇಕು. ಈ ಸಮಿತಿಯು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಉತ್ತರದಾಯಿ ಆಗಿರಬೇಕು ಎಂದೂ ಸದನ ಸಮಿತಿ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.