ADVERTISEMENT

ಮೆಟ್ರೊಗೆ ರೂ.500 ಕೋಟಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:20 IST
Last Updated 28 ಫೆಬ್ರುವರಿ 2011, 19:20 IST

ನವದೆಹಲಿ: ಕೇಂದ್ರ ಸರ್ಕಾರ ‘ನಮ್ಮ ಮೆಟ್ರೊ’ಗೆ 2011-12ರ ಬಜೆಟ್‌ನಲ್ಲಿ ರೂ. 500 ಕೋಟಿ  ನಿಗದಿ ಮಾಡಿದೆ.
ಕಳೆದ ವರ್ಷದ ಬಜೆಟ್‌ನಲ್ಲಿ ಕೇವಲ ರೂ. 576 ಕೋಟಿ ನೀಡಲಾಗಿತ್ತು. ಚೆನ್ನೈ ಮೆಟ್ರೊಗೆ ಹೋಲಿ ಸಿದರೆ ರಾಜ್ಯಕ್ಕೆ ಸಿಕ್ಕಿರುವ ಪಾಲು ಕಡಿಮೆ.

ಚೆನ್ನೈಗೆ ರೂ. 2160ಕೋಟಿ ನೀಡಲಾಗಿದೆ. ತೀವ್ರಗತಿಯಲ್ಲಿ ಮೆಟ್ರೊ ಕಾಮಗಾರಿ ಕೈಗೊಂಡಿರುವ ದೆಹಲಿಗೆ ರೂ. 1351ಕೋಟಿ ಒದಗಿಸಲಾಗಿದೆ. ರಾಜ್ಯಕ್ಕೆ ನಿಗದಿಯಾದ ಹಣದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಪಾಲು ಬಂಡವಾಳ ರೂ. 500 ಕೋಟಿ, ವಿದೇಶಿ ಸಾಲ ನೆರವು ರೂ. 790 ಕೋಟಿ ಸೇರಿದೆ.

ಈಗಾಗಲೇ ಪೂರ್ಣಗೊಂಡಿರುವ ಮಹಾತ್ಮಗಾಂಧಿ ರಸ್ತೆ- ಬಯ್ಯಪ್ಪ ನಹಳ್ಳಿ ಮಾರ್ಗ ಏಪ್ರಿಲ್ 4ಕ್ಕೆ ಉದ್ಘಾಟನೆ ಆಗಲಿದೆ. ಒಟ್ಟು 42.3 ಕಿ.ಮೀ. ವ್ಯಾಪ್ತಿ ಒಳಗೊಂಡ ಮೊದಲ ಹಂತದ ಯೋಜನೆ 2013ರ ಜೂನ್‌ಗೆ ಮುಗಿಯಲಿದೆ. ಮೊದಲ ಹಂತದ ಯೋಜನೆಗೆ ರಾಜ್ಯ ಸರ್ಕಾರ ತನ್ನ ಈ ವರ್ಷದ ಬಜೆಟ್‌ನಲ್ಲಿ ರೂ. 683ಕೋಟಿ ಒದಗಿಸಿದೆ.

ಏಳು ಲೈನುಗಳ 71ಕಿ.ಮೀ. ವ್ಯಾಪ್ತಿ ಹೊಂದಿರುವ ಎರಡನೇ ಹಂತದ ಯೋಜನೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತ ಮೆಟ್ರೊ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಅನುಕೂಲ ಆಗುವಂತೆ ಸರ್ಕಾರ ಹಣಕಾಸು ನೆರವು ಒದಗಿಸುತ್ತಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ತಿಳಿಸಿದರು.

ಪ್ರಣವ್ ಮುಖರ್ಜಿ ಬೆಂಗಳೂರು ಮಾನಸಿಕ ಆರೋಗ್ಯ ಸಂಸ್ಥೆ (ನಿಮ್ಹಾನ್ಸ್)ಗೆ  ರೂ. 166 ಕೋಟಿ ನಿಗದಿ ಮಾಡಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 26ಕೋಟಿ ಅಧಿಕ. ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಗೆ ರೂ. 41ಕೋಟಿ  ರೂಪಾಯಿ ಒದಗಿಸಿದ್ದಾರೆ.

ಕಾಫಿ ಮಂಡಳಿಗೆ ರೂ. 106ಕೋಟಿ ಕೊಡಲಾಗಿದೆ. ಹಿಂದಿನ ಬಜೆಟ್‌ನಲ್ಲಿ ರೂ. 339ಕೋಟಿ ನೀಡಲಾಗಿತ್ತು. ಸಂಕಷ್ಟಕ್ಕೆ ಸಿಕ್ಕಿದ್ದ ಕಾಫಿ ಬೆಳೆಗಾರರ ನೆರವು ಪ್ಯಾಕೇಜ್ ಕೂಡಾ ಇದರಲ್ಲಿ ಸೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.