ADVERTISEMENT

ಮೇವು ಹಗರಣ: 61 ಆರೋಪಿಗಳಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ರಾಂಚಿ (ಐಎಎನ್‌ಎಸ್): ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ 14 ಕೋಟಿ ರೂಪಾಯಿಗಳ ಮೇವು ಹಗರಣಕ್ಕೆ ಸಂಬಂಧಿಸಿದಂತೆ 61 ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಿದೆ. ಹಗರಣದ ಒಟ್ಟು 73 ಆರೋಪಿಗಳಲ್ಲಿ ವಿಚಾರಣೆಯ ವೇಳೆ ಒಂಬತ್ತು ಮಂದಿ ಮೃತಪಟ್ಟಿದ್ದು, ಇತರ ಮೂವರು ಸಿಬಿಐನ `ಮಾಫಿ ಸಾಕ್ಷಿ~ಗಳಾಗಿ ಪರಿವರ್ತನೆಯಾಗಿದ್ದಾರೆ.

ಸರ್ಕಾರಿ ಖಜಾನೆಯಿಂದ ರೂ 14.52 ಕೋಟಿಗಳನ್ನು ವಂಚನೆಯ ಮಾರ್ಗದಲ್ಲಿ ಪಡೆದುಕೊಂಡಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ನ್ಯಾಯಾಲಯವು 20 ಆರೋಪಿಗಳಿಗೆ ಒಂದರಿಂದ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು 30 ಸಾವಿರದಿಂದ 3 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಿದೆ. ಉಳಿದ ಆರೋಪಿಗಳಿಗೆ ಬುಧವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ.

ಬಹುಕೋಟಿ ರೂಪಾಯಿಗಳ ಈ ಹಗರಣ 1990ರ ದಶಕದಲ್ಲಿ ಬಿಹಾರದ ಪಶುಸಂಗೋಪನಾ ಇಲಾಖೆಯಲ್ಲಿ ನಡೆದಿತ್ತು. ಹಗರಣದಲ್ಲಿ ಒಟ್ಟು 61 ಪ್ರಕರಣಗಳನ್ನು ದಾಖಲಿಸಿದ್ದು, ಅವುಗಳಲ್ಲಿ 52 ಪ್ರಕರಣಗಳು 2000ರಲ್ಲಿ ಬಿಹಾರದಿಂದ ಹೊಸ ರಾಜ್ಯವಾಗಿ ವಿಭಜನೆಯಾದ ಜಾರ್ಖಂಡ್‌ಗೆ ವರ್ಗಾವಣೆ ಆಗಿವೆ. ಸಿಬಿಐ ನ್ಯಾಯಾಲಯ ಈಗಾಗಲೇ 33 ಪ್ರಕರಣಗಳಲ್ಲಿ ತೀರ್ಪನ್ನು ನೀಡಿದೆ. ಬಿಹಾರದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಮತ್ತು ಜಗನ್ನಾಥ್ ಮಿಶ್ರಾ ಅವರು ಐದು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಇವುಗಳ ವಿಚಾರಣೆ ವಿವಿಧ ಸಿಬಿಐ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.