ADVERTISEMENT

ಮೋದಿ ಅಭಿವೃದ್ಧಿ ಮಂತ್ರ: ಸುಳ್ಳಿನ ಕಂತೆಯೇ?

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ಅಹಮದಾಬಾದ್: `ವಿಕಾಸ ಪುರುಷ' ನರೇಂದ್ರ ಮೋದಿ ಗುಜರಾತಿನ ಸ್ವರೂಪವನ್ನೇ ಬದಲಾವಣೆ ಮಾಡಲು ಹೊರಟಿದ್ದಾರೆ. ದೇಶ-ವಿದೇಶಗಳ ಉದ್ಯಮಿಗಳನ್ನು `ಬನ್ನಿ ನಮ್ಮೂರಿಗೆ ಬಂಡವಾಳ ಹೂಡಲು' ಎಂದು ಕೈ ಮುಗಿದು ಕರೆಯುತ್ತಿದ್ದಾರೆ. ಉಳಿದೆಡೆಗಿಂತ ಗುಜರಾತಿನಲ್ಲಿ `ಹೂಡಿಕೆ ಸ್ನೇಹಿ ವಾತಾವಾರಣವಿದೆ' ಎಂಬ ಭಾವನೆ ಉದ್ಯಮ ವಲಯದಲ್ಲಿದೆ. ಟಾಟಾ, ಅಂಬಾನಿ ಅವರಂಥ ದೊಡ್ಡ ಉದ್ಯಮಿಗಳು ಈ ರಾಜ್ಯದ ಕೈಗಾರಿಕಾ ನೀತಿ ಮೆಚ್ಚಿದ್ದಾರೆ.

ಬೇರೆ ರಾಜ್ಯಗಳಲ್ಲಿ ಬಂಡವಾಳ ಹೂಡಲು ಹೋಗಿ ಕೈಸುಟ್ಟುಕೊಂಡ ಎಷ್ಟೊ ಉದ್ಯಮಗಳು ಗುಜರಾತಿನ ಕಡೆ ಮುಖ ಮಾಡಿವೆ. ರೈತರ ತೀವ್ರ ಪ್ರತಿಭಟನೆಯಿಂದಾಗಿ ಪಶ್ಚಿಮ ಬಂಗಾಳದಿಂದ ಕಂಬಿ ಕಿತ್ತ `ಟಾಟಾ ನ್ಯಾನೊ' ಘಟಕ ಗುಜರಾತಿನಲ್ಲಿ ಉತ್ಪಾದನೆ ಆರಂಭಿಸಿದೆ. ಹತ್ತು ವರ್ಷಗಳ ಹಿಂದಿನ `ಕೋಮು ದಳ್ಳುರಿ' ಕಂಡು ಮೂಗು ಮುರಿದಿದ್ದ ಹೊರ ರಾಷ್ಟ್ರಗಳು ನಿಧಾನವಾಗಿ ಮೋದಿ ಅವರತ್ತ `ಸ್ನೇಹ ಹಸ್ತ' ಚಾಚಿವೆ.

ಮೋದಿ ಎರಡು ವರ್ಷಕ್ಕೊಮ್ಮೆ ಜಾಗತಿಕ ಹೂಡಿಕೆದಾರರ ಸಮಾವೇಶ ಏರ್ಪಡಿಸುತ್ತಿದ್ದಾರೆ. ಕೊನೆಯ ಹೂಡಿಕೆದಾರರ ಸಮಾವೇಶ ನಡೆದಿದ್ದು ಎರಡು ವರ್ಷದ ಹಿಂದೆ. ಮುಂದಿನ ಸಮಾವೇಶಕ್ಕೆ ಸಿದ್ಧತೆಗಳು ಆರಂಭವಾಗಿವೆ. `ಗುಜರಾತ್ ಚೇಂಬರ್ ಆಫ್ ಕಾಮರ್ಸ್' ಮಾಹಿತಿಯಂತೆ 2011ರ ಅಂತ್ಯದವರೆಗೆ ರೂ 1,85,198 ಕೋಟಿ ಮೊತ್ತದ 5538 ಯೋಜನೆಗಳು ಕಾರ್ಯಗತವಾಗಿವೆ. ರೂ 6,99,592 ಕೋಟಿ ಅಂದಾಜಿನ 3063 ಉದ್ಯಮಗಳು ಇನ್ನೂ ಕಾರ್ಯಾರಂಭ ಮಾಡಬೇಕಾಗಿದೆ. 33 `ವಿಶೇಷ ಆರ್ಥಿಕ ವಲಯ'ಗಳಿಗೆ ಅನುಮೋದನೆ ಕೊಡಲಾಗಿದೆ.

ದೇಶದ ಒಟ್ಟಾರೆ ಉದ್ದೇಶಿತ ಹೂಡಿಕೆಯಲ್ಲಿ ಗುಜರಾತಿನ ಪಾಲು ಶೇ 19.2; ಆರ್ಥಿಕ ಬೆಳವಣಿಗೆ ದರ ಶೇ 10.5ರ ಆಜುಬಾಜು. ಉಳಿದ ರಾಜ್ಯಗಳ ಸರಾಸರಿ ಪ್ರಗತಿ ದರ ಶೇ 8 ಕ್ಕಿಂತ ಕಡಿಮೆ. ಎರಡನೇ ಸ್ಥಾನ ಮಹಾರಾಷ್ಟ್ರದ್ದು. ರಾಜ್ಯ ಸರ್ಕಾರ ಮೂಲಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಿದೆ. ಗುಜರಾತಿನ ರಸ್ತೆಗಳ ಬಗ್ಗೆ ಯಾರೂ ಬೆರಳು ತೋರುವಂತಿಲ್ಲ. ಸೊಗಸಾದ ರಸ್ತೆಗಳು. ಅದು ರಾಷ್ಟ್ರೀಯ ಹೆದ್ದಾರಿ ಅಥವಾ ರಾಜ್ಯ ಹೆದ್ದಾರಿಯೇ ಇರಬಹುದು. ಗ್ರಾಮಾಂತರ ಪ್ರದೇಶಗಳಿಗೆ ಹೋಗುವ `ಸಿಂಗಲ್ ರಸ್ತೆ'ಗಳೇ ಆಗಿರಬಹುದು.

ಗುಜರಾತ್ ಅತ್ಯುತ್ತಮ ವಿದ್ಯುತ್ ವಿತರಣಾ ವ್ಯವಸ್ಥೆ ಹೊಂದಿದೆ. ಕೈಗಾರಿಕೆಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದೆ. ಆದರೆ, ದುಬಾರಿ. ಯೂನಿಟ್ ಸರಾಸರಿ ದರ ಆರು ರೂಪಾಯಿ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಇದು ಹೊರಲಾಗದ ಹೊರೆ. ಅಹಮದಾಬಾದಿನ ಯಾವ ದಿಕ್ಕಿಗೇ ಹೋದರೂ ರಸ್ತೆ ಬದಿಗಳಲ್ಲಿ ಕೈಗಾರಿಕೆಗಳ ಸಾಲು ಸಾಲು. ಉಳಿದ ಜಿಲ್ಲಾ ಕೇಂದ್ರಗಳಲ್ಲೂ ಅದೇ ವಾತಾವರಣ. ಗುಜರಾತಿನ ಆಡಳಿತ ಕೇಂದ್ರ ಗಾಂಧಿನಗರ ಯಾವಾಗಲೂ ತಣ್ಣಗಿದ್ದರೆ, ಆರ್ಥಿಕ ರಾಜಧಾನಿ ಜನ- ವಾಹನಗಳಿಂದ ತುಂಬಿ ತುಳುಕುತ್ತಿದೆ.

`ಅಹಮದಾಬಾದ್ `ಟ್ರಾಫಿಕ್ ಜಾಮ್' ಸಮಸ್ಯೆ ಪರಿಹರಿಸಲು ರಸ್ತೆಗಳನ್ನು ವಿಶಾಲಗೊಳಿಸುವ ಕಾಮಗಾರಿ ನಡೆಯುತ್ತಿದೆ. ಮೇಲ್ ಸೇತುವೆಗಳನ್ನು ಕಟ್ಟಲಾಗುತ್ತಿದೆ. ನಗರ ಸಾರಿಗೆ ಬಸ್ಸುಗಳ ಓಡಾಟಕ್ಕೆ `ಪ್ರತ್ಯೇಕ ಕಾರಿಡಾರ್' ಮಾಡಲಾಗುತ್ತಿದೆ. ಇದೊಂದು ಅತ್ಯುತ್ತಮ ಯೋಜನೆ. ರಸ್ತೆ ಮಧ್ಯದಲ್ಲಿರುವ ಈ ಸಿಟಿ ಬಸ್ ಕಾರಿಡಾರ್‌ನಲ್ಲಿ ಬೇರೆ ವಾಹನ ಓಡಾಡುವಂತಿಲ್ಲ. ಇನ್ನೊಂದು ವರ್ಷದಲ್ಲಿ  ಯೋಜನೆ ಪೂರ್ಣವಾಗಲಿದೆ.

ಗುಜರಾತ್ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದೆ. ಆದರೆ, ಅಹಮದಾಬಾದ್‌ಗೆ ಸರಿಸಮಾನಾಗಿ ಉಳಿದ ನಗರಗಳು ಅಭಿವೃದ್ಧಿ ಆಗಿಲ್ಲ. ಸೌರಾಷ್ಟ್ರ, ಕಚ್, ಜುನಾಗಢ, ಪೋರ್ ಬಂದರ್ ಮುಂತಾದ ನಗರಗಳು ಹಿಂದುಳಿದಿವೆ. ಕಚ್‌ನಲ್ಲಿ ಬಹಳ ಹಿಂದೆಯೇ ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದಿದೆ. ಮಹಾತ್ಮ ಹುಟ್ಟಿದ ಊರು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರವಾಸೋದ್ಯಮ ಕೇಂದ್ರವಾಗಿ ಪೋರ್‌ಬಂದರ ಅಭಿವೃದ್ಧಿಪಡಿಸಬಹುದಿತ್ತು. ಆದರೆ, ಮೋದಿ ಅವರಿಗೆ ಆಸಕ್ತಿ ಇದ್ದಂತಿಲ್ಲ ಎಂಬುದು ಸ್ಥಳೀಯರ ಕೊರಗು. ಪ್ರಾದೇಶಿಕ ಅಸಮಾನತೆ ಕೂಗು ಗುಜರಾತಿನಲ್ಲೂ ಕೇಳಿಬರುತ್ತಿದೆ.

ಕೃಷಿ ನಿರ್ಲಕ್ಷ್ಯ: ನರೇಂದ್ರ ಮೋದಿ ಕೈಗಾರಿಕೆ ಕೊಟ್ಟಷ್ಟು ಪ್ರಾಮುಖ್ಯವನ್ನು ಕೃಷಿಗೆ ನೀಡಿಲ್ಲ. ಕೈಗಾರಿಕೆಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಕೃಷಿಕರಿಗೆ ಎಂಟು ಗಂಟೆ ಮಾತ್ರ `ಥ್ರೀ ಫೇಸ್'. ಅದಕ್ಕೂ ಹಣ ಪಾವತಿ ಮಾಡಬೇಕು. ಕೈಗಾರಿಕೆಗೆ ಸಿಗುತ್ತಿರುವ ರಿಯಾಯ್ತಿ ಕೃಷಿಕರಿಗೆ ಸಿಗುತ್ತಿಲ್ಲ. ನೀರಾವರಿ ಸೌಲಭ್ಯಕ್ಕೆ ಒತ್ತು ಕೊಟ್ಟಿಲ್ಲ. ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ನೀರಿಗಾಗಿ ರೈತರು ಪರದಾಡುತ್ತಿದ್ದಾರೆ. `ಸರ್ದಾರ್ ಸರೋವರ ಅಣೆಕಟ್ಟೆ ಕಾಲುವೆ' ಕಾಮಗಾರಿ ಅಪೂರ್ಣಗೊಂಡಿದೆ. 

ಕೃಷಿಯಲ್ಲೂ ಗುಜರಾತ್ ಮುಂದೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಗುಜರಾತ್ ಸರ್ಕಾರದ ಕೃಷಿ ನೀತಿಯಿಂದ ಕೃಷಿಕರು ಬೇಸತ್ತಿದ್ದಾರೆ. ಜತೆಗೆ ಗ್ರಾಮೀಣ ಪ್ರದೇಶವನ್ನು ಕಡೆಗಣಿಸಲಾಗಿದೆ. ಮೋದಿ ದೊಡ್ಡ ಕೈಗಾರಿಕೆಗಳಿಗೆ  ಅನುಕೂಲ ಕಲ್ಪಿಸುತ್ತಿದ್ದಾರೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಕಡೆಗಣಿಸುತ್ತಿದ್ದಾರೆಂಬ ಅಸಮಾಧಾನ `ಎಂಎಸ್‌ಎಂಇ' ವಲಯದಲ್ಲಿದೆ.

ಕೃಷಿ ಜಮೀನು ವಶಪಡಿಸಿಕೊಂಡು ಉದ್ಯಮಿಗಳಿಗೆ ವಿತರಿಸುವ ಗುಜರಾತ್ ಸರ್ಕಾರದ ಧೋರಣೆ ವಿರುದ್ಧ ರೈತರು ಪ್ರತಿಭಟಿಸಿದ್ದಾರೆ. ಮಹೂವಾದಲ್ಲಿ  `ನಿರ್ಮಾ ಸಿಮೆಂಟ್ ಕಾರ್ಖಾನೆ'ಗೆ ಜಮೀನು ಸ್ವಾಧೀನ ಮಾಡಿಕೊಳ್ಳಲು ಮುಂದಾದ ಸರ್ಕಾರದ ಕ್ರಮದ ವಿರುದ್ಧ ರೈತರು ಚಳವಳಿ ನಡೆಸಿದ್ದು ಇತಿಹಾಸ. ಬಿಜೆಪಿ ಶಾಸಕ ಕನು ಕಲ್ಸಾರಿಯಾ ಪ್ರತಿಭಟನೆಯ ಮುಂಚೂಣಿಯಲ್ಲಿದ್ದವರು. ಈಗ ಸರ್ಕಾರ ಸಿಮೆಂಟ್ ಕಾರ್ಖಾನೆ ಪ್ರಸ್ತಾವ ಕೈಬಿಟ್ಟಿದೆ.

ಗುಜರಾತ್ ಬಿಜೆಪಿ ಸರ್ಕಾರ ಉತ್ತಮ ಕೆಲಸಗಳನ್ನು ಮಾಡಿದೆ. ಮಾಡಬೇಕಾದ್ದು ಬೇಕಾದಷ್ಟಿದೆ ಎಂಬುದು ಗುಜರಾತಿಗಳ ಅಭಿಪ್ರಾಯ. `ಮುಖ್ಯಮಂತ್ರಿ ಮಾತಿನ ಮಲ್ಲ. ಮಾತಿನಲ್ಲೇ ಎಲ್ಲರನ್ನು ಮೋಡಿ ಮಾಡುತ್ತಾರೆ. ಕೇಂದ್ರದ ಅನೇಕ ಯೋಜನೆಗಳನ್ನು ರಾಜ್ಯ ಸರ್ಕಾರದ ಯೋಜನೆಗಳೆಂದು ಬಿಂಬಿಸಿಕೊಳ್ಳುತ್ತಿದ್ದಾರೆ' ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡುತ್ತಿದ್ದಾರೆ.

ಮೋದಿ ಹತ್ತು ವರ್ಷದ ತಮ್ಮ ಸಾಧನೆಯನ್ನು ಜನರ ಮುಂದೆ ಇಡುತ್ತಿದ್ದಾರೆ. ಎಲ್ಲೂ 2002ರ ಘಟನೆ ಕುರಿತು ಪ್ರಸ್ತಾಪ ಮಾಡುತ್ತಿಲ್ಲ. ಕಾಂಗ್ರೆಸ್ ನರೋಡ ಪಾಟಿಯಾ ಹತ್ಯಾಕಾಂಡ ಕೆದಕುವ ಗೋಜಿಗೆ ಹೋಗಿಲ್ಲ. `ಮೋದಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಯುಪಿಎ ಸರ್ಕಾರದ ಕಾರ್ಯಕ್ರಮಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ' ಎಂದು ಸೋನಿಯಾ ಗಾಂಧಿ ಕಿಡಿ ಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಕೂಡಾ ಮೋದಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ. ರಾಜ್ಯ ವಿಧಾನಸಭೆಯ ಎರಡನೇ ಹಂತದ ಚುನಾವಣೆ ಸೋಮವಾರ ನಡೆಯಲಿದೆ. ಮೋದಿ ಅಭಿವೃದ್ಧಿ ಮಂತ್ರ ಪಠಿಸುತ್ತಿದ್ದಾರೆ. ಹತ್ತು ವರ್ಷದ ಹಿಂದೆ ನಡೆದ ಮತೀಯ ಗಲಭೆ ಬಳಿಕ ಗುಜರಾತ್ ತಣ್ಣಗಾಗಿದೆ. ಸಣ್ಣಪುಟ್ಟ ಘಟನೆಯೂ ನಡೆದಿಲ್ಲ ಎಂಬ ಸಮಾಧಾನದ ಮಾತುಗಳನ್ನು ಎಲ್ಲ ಸಮಾಜದ ಜನ ಹೇಳುತ್ತಿದ್ದಾರೆ. ಮುಖ್ಯಮಂತ್ರಿಗೆ ಇದು ದೊಡ್ಡ ಪ್ರಮಾಣಪತ್ರ
 (ಮುಗಿಯಿತು)

`ಸಣ್ಣ ಕೈಗಾರಿಕೆಗಳು ಸೊರಗುತ್ತಿವೆ'

ADVERTISEMENT

ಗುಜರಾತ್ ಚೇಂಬರ್ ಆಫ್ ಕಾಮರ್ಸ್ ಗೌರವ ಕಾರ್ಯದರ್ಶಿ ಜಯೇಂದ್ರ ವಿ. ಟನ್ನ ರಾಜ್ಯದ ಕೈಗಾರಿಕೆ ನೀತಿ ಕುರಿತು `ಪ್ರಜಾವಾಣಿ' ಜತೆ ತಮ್ಮ ಅನಿಸಿಕೆಗಳನ್ನು  ಹಂಚಿಕೊಂಡಿದ್ದಾರೆ.

* ನರೇಂದ್ರ ಮೋದಿ ಆಡಳಿತ ಹೇಗಿದೆ?
ಮುಖ್ಯಮಂತ್ರಿ ಒಳ್ಳೆ ಆಡಳಿತಗಾರರು. 10 ವರ್ಷದಿಂದ ಅತ್ಯುತ್ತಮವಾಗಿ ಕೆಲಸ ಮಾಡಿ ಉಳಿದವರಿಗೆ ಮಾದರಿ ಆಗಿದ್ದಾರೆ. ಉದ್ಯಮಗಳ ಸ್ಥಾಪನೆಗೆ ಒತ್ತು ನೀಡಿದ್ದಾರೆ. ಕೃಷಿಗೂ ಆದ್ಯತೆ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉತ್ಸವಗಳನ್ನು ಏರ್ಪಡಿಸುತ್ತಿದ್ದಾರೆ. `ಮಕ್ಕಳ ಶಾಲಾ ಪ್ರವೇಶಂ' ಯೋಜನೆ ಕಡೆಗೂ ಗಮನ ಹರಿಸಿದ್ದಾರೆ.

*ಬಿಜೆಪಿ ಸರ್ಕಾರದ ಕೈಗಾರಿಕಾ ನೀತಿ ಕುರಿತು ಏನು ಹೇಳುತ್ತೀರಿ?
ಹತ್ತು ವರ್ಷಕ್ಕೆ ಮೊದಲು ಆಡಳಿತ ನಡೆಸಿದ ಸರ್ಕಾರಕ್ಕೆ ಹೋಲಿಸಿದರೆ ಮೋದಿ ಆಡಳಿತ ಚೆನ್ನಾಗಿದೆ. ಗುಜರಾತಿನ ಕೈಗಾರಿಕಾ ನೀತಿಗೆ ಜಾಗತಿಕ ಮನ್ನಣೆ ಸಿಕ್ಕಿದೆ. ಚೀನಾ, ಜಪಾನ್, ಆಸ್ಟ್ರೇಲಿಯಾ, ಕೆನಡಾದಂಥ  ದೇಶಗಳು ಗುಜರಾತಿನ ಕಡೆ ನೋಡುತ್ತಿವೆ. ಉದ್ಯಮಗಳ ಸ್ಥಾಪನೆಗೆ ಆಸಕ್ತಿ ತಳೆದಿವೆ. ನಾವು ಗುಜರಾತಿಗಳು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ. ಮೋದಿಗೆ ದೂರದೃಷ್ಟಿ ಇದೆ. ತಿಳುವಳಿಕೆ ಚೆನ್ನಾಗಿದೆ. ಭ್ರಷ್ಟಾಚಾರಿ ಅಲ್ಲ. ಶುದ್ಧ ಹಸ್ತದ ಮನುಷ್ಯ. ಸಂಪುಟ ಸಚಿವರೂ ಹಾಗೆ ಇದ್ದಾರೆ.

ಒಂದು ಸತ್ಯವನ್ನು ನಾನು ಹೇಳಲೇಬೇಕು. ಮೋದಿ ಸರ್ಕಾರದ ನೀತಿ ಬೃಹತ್ ಕೈಗಾರಿಕೆಗಳಿಗೆ ಅನುಕೂಲವಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸೊರಗುತ್ತಿವೆ. ನುರಿತ ಕೆಲಸಗಾರರು ಸಿಗುವುದಿಲ್ಲ. ಈಗ ತರಬೇತಿ ಕೇಂದ್ರಗಳನ್ನು ಸರ್ಕಾರ ತೆರೆಯುತ್ತಿದೆ. ಸಣ್ಣ ಕೈಗಾರಿಕೆಗಳಿಗೆ ಸಬ್ಸಿಡಿ ಕಡಿಮೆ ಇದೆ. ಪುಟ್ಟ ಕೈಗಾರಿಕೆಗಳಿಗೆ ಸಣ್ಣ ಅಳತೆಯ ನಿವೇಶನ ಸಿಗುವುದಿಲ್ಲ. ಕನಿಷ್ಠ ಎರಡು ಸಾವಿರ ಮೀಟರ್ ಜಾಗ ಖರೀದಿಸಬೇಕು. ಹಿಂದೆ 250 ಮೀಟರ್ ಜಾಗ ಸಿಗುತಿತ್ತು. ಸುಲಭ ಕಂತಿನಲ್ಲಿ ಕಟ್ಟಬಹುದಿತ್ತು. ಈ ಸೌಲಭ್ಯ ಈಗ ಸಿಗುತ್ತಿಲ್ಲ. ದೊಡ್ಡ ಕಾರ್ಖಾನೆಗಳಿಂದ ಸಣ್ಣ ಕೈಗಾರಿಕೆಗಳು ಸೊರಗುತ್ತಿವೆ.

* ಸಣ್ಣ ಉದ್ಯಮಗಳ ಸಮಸ್ಯೆ ಸರ್ಕಾರದ ಗಮನಕ್ಕೆ ಬಂದಿದೆಯೇ?
ಮುಖ್ಯಮಂತ್ರಿ ನರೇಂದ್ರ ಮೋದಿ ಗಮನಕ್ಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಸ್ಯೆಯನ್ನು ತರಲಾಗಿದೆ. ಪರಿಹಾರ ಮಾಡುವ ಭರವಸೆ ನೀಡಿದ್ದಾರೆ. ನಮ್ಮ ಸಮಸ್ಯೆಗಳನ್ನು ಅನುಕಂಪದಿಂದ ನೋಡಬೇಕು. ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ನಮ್ಮ ಪಾಲು ಇದೆ ಎಂಬ ಸಂಗತಿಯನ್ನು ಮರೆಯಬಾರದು.  

*ಗುಜರಾತಿನಲ್ಲಿ ಮೂಲಸೌಲಭ್ಯಗಳು ಹೇಗಿವೆ.
ಒಳ್ಳೆ ರಸ್ತೆಗಳಿವೆ. ನೀರು- ವಿದ್ಯುತ್‌ಗೆ ಸಮಸ್ಯೆ ಇಲ್ಲ. ಆದರೆ, ಕೃಷಿಗೆ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಹೇಳಿಕೊಳ್ಳುವ ಪ್ರಮಾಣದಲ್ಲಿ ಕೃಷಿಗೆ ಒತ್ತು ನೀಡುತ್ತಿಲ್ಲ. ವಿದ್ಯುತ್ ನೀತಿ ಗ್ರಾಹಕ ಸ್ನೇಹಿ ಅಲ್ಲ. ವಿದ್ಯುತ್ ನಿಯಂತ್ರಣ ಹಾಗೂ ದರದ ಬಗ್ಗೆ ಜನರಿಗೆ ಸಮಾಧಾನ ಇಲ್ಲ.

*ಉದ್ಯಮ ಸ್ಥಾಪನೆಗೆ ಅನುಮತಿ ಪಡೆಯುವ ಪ್ರಕ್ರಿಯೆ ಸರಳವಾಗಿದೆಯೇ?
ಉದ್ಯಮಗಳ ಸ್ಥಾಪನೆ ಅನುಮತಿಗೆ ಸರ್ಕಾರ `ಏಕ ಗವಾಕ್ಷಿ ವ್ಯವಸ್ಥೆ'  ಜಾರಿಗೆ ತಂದಿದೆ. ಪ್ರಕ್ರಿಯೆ ಕೂಡಾ ಸುಲಭವಾಗಿದೆ. ಮೇಲ್ಮಟ್ಟದಲ್ಲಿ ಭ್ರಷ್ಟಾಚಾರ ಇಲ್ಲ. ಕೆಳಮಟ್ಟದಲ್ಲಿದೆ. ಅದನ್ನು ಸರಿಪಡಿಸಬೇಕು. ಗುಜರಾತಿನಲ್ಲಿ ಹೂಡಿಕೆ ಸ್ನೇಹಿ ವಾತಾವರಣ ಇರುವುದರಿಂದ ಎಲ್ಲರೂ ಇಲ್ಲಿಗೆ ಬರುತ್ತಾರೆ. ಉಳಿದ ರಾಜ್ಯಗಳಲ್ಲಿ ವ್ಯವಸ್ಥೆ ಅತ್ಯಂತ ಕೆಟ್ಟಿದೆ. ದಕ್ಷಿಣ ರಾಜ್ಯಗಳ ಉದ್ಯಮಿಗಳು ಜವಳಿ ಉದ್ಯಮ ಆರಂಭಿಸಲು ಗುಜರಾತಿಗೆ ಬರುತ್ತಿದ್ದಾರೆ. ಚು

* ವಿಧಾನಸಭೆ ಚುನಾವಣೆ ಬಗ್ಗೆ ಏನು ಹೇಳುತ್ತೀರಿ?
ಮೊರಾರ್ಜಿ ದೇಸಾಯಿ ಹಾಗೂ ಗುಲ್ಜಾರಿಲಾಲ್ ನಂದಾ ಅವರ ನಂತರ ರೂಪುಗೊಂಡಿರುವ ಒಳ್ಳೆಯ ನಾಯಕ  ಮೋದಿ. ಅವರು ರಾಜಕಾರಣದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕು. ಬೆಳೆಯುತ್ತಾರೆ ಎಂಬ ವಿಶ್ವಾಸವಿದೆ. ಮೋದಿ ಆರಂಭಿಸಿರುವ ಒಳ್ಳೆಯ ಕೆಲಸಗಳು ಮುಂದುವರಿಯಬೇಕಿದೆ. ಈ ಕಾರಣಕ್ಕೆ ಜನ ಮತ್ತೆ ಅವರನ್ನು ಗೆಲ್ಲಿಸುತ್ತಾರೆ.

ಭವಿಷ್ಯ ಇಂದು ನಿರ್ಧಾರ

ಗುಜರಾತ್‌ನಲ್ಲಿ ಸೋಮವಾರ ನಡೆಯಲಿರುವ ಎರಡನೇ ಹಂತದ ಮತದಾನದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ 800 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.

ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಮಣಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮೋದಿ ಅವರಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಮತದಾರರನ್ನು ಓಲೈಸಲು ಅವರು ಎಲ್ಲಾ ತಂತ್ರಗಳನ್ನು ಬಳಸಿದ್ದು, ಅವರಿಗೆ ಇದು  `ಮಾಡು ಇಲ್ಲವೆ ಮಡಿ' ಹೊರಾಟವಾಗಿದೆ.

ಗೋದ್ರಾ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಿಕ್ಷೆಯನ್ನು ಅನುಭವಿಸಿರುವ ಕಡ್ವಾ ಪಟೇಲ್‌ರು ಹೆಚ್ಚಾಗಿರುವ ನಗರ ಪ್ರದೇಶಗಳ ಕ್ಷೇತ್ರಗಳು ಬಿಜೆಪಿ ಅಭ್ಯರ್ಥಿಗಳಿಗೆ ಸವಾಲಾಗಿ ಪರಿಣಮಿಸಿವೆ. ಕಾಂಗ್ರೆಸ್‌ನ ಹಿರಿಯ ಧುರೀಣ ಶಂಕರ್‌ಸಿನ್ಹ ವಘೇಲಾ, ನಿವೃತ್ತ ಐಪಿಎಸ್ ಅಧಿಕಾರಿ ಸಂಜಯ್ ಭಟ್ ಅವರ ಪತ್ನಿ ಶ್ವೇತಾ ಭಟ್, ಗುಜರಾತ್ ಪರಿವರ್ತನ ಪಕ್ಷದ ವತಿಯಿಂದ ಜಾಗೃತಿ ಪಾಂಡೆ ಅವರ ಭವಿಷ್ಯವೂ ಸೋಮವಾರ ನಿರ್ಧಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.