ADVERTISEMENT

ಮೋದಿ ಕ್ಷಮೆ ಯಾಚನೆಗೆ ಕಾಂಗ್ರೆಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ನವದೆಹಲಿ (ಐಎಎನ್‌ಎಸ್, ಪಿಟಿಐ): ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿದೇಶ ಪ್ರವಾಸ ಹಾಗೂ ವಿದೇಶದಲ್ಲಿನ ಅವರ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ ರೂ 1,880 ಕೋಟಿ ವೆಚ್ಚ ಮಾಡಿದೆ ಎಂಬ ಆರೋಪ ಸುಳ್ಳೆಂದು ಸಾಬೀತಾಗಿದ್ದು, ಈ ಸಂಬಂಧ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಮಂಗಳವಾರ ಆಗ್ರಹಿಸಿದೆ.

ಮೋದಿ ನೀಡಿರುವ ಅಂಕಿ-ಅಂಶಗಳು ತಪ್ಪಾಗಿವೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಪಡೆಯದೆ ಮಾಧ್ಯಮಗಳ ಮುಂದೆ ಈ ವಿವರ ನೀಡಿದ್ದು, ಅವರು ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಶುಕ್ಲಾ ತಿಳಿಸಿದ್ದಾರೆ.

`ಸೋನಿಯಾ ಅವರ ಚಿಕಿತ್ಸೆಗೆ ಸರ್ಕಾರದ ಬೊಕ್ಕಸದಿಂದ ಒಂದು ಪೈಸೆಯನ್ನೂ ಖರ್ಚು ಮಾಡಲಾಗಿಲ್ಲ. ಮೋದಿ ಉಲ್ಲೇಖಿಸಿರುವ ಸುದ್ದಿಪತ್ರಿಕೆಯ ಸಂಪಾದಕರೂ ಇದು ಸುಳ್ಳು ಎಂದು ತಿಳಿಸಿದ್ದಾರೆ~ ಎಂದೂ ಶುಕ್ಲಾ ಹೇಳಿದ್ದಾರೆ.

ನಾಜಿ ತರಬೇತಿ: ಈ ಆರೋಪಕ್ಕೆ ಸಂಬಂಧಿಸಿದಂತೆ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, `ತಪ್ಪು ಪ್ರಚಾರ~ಕ್ಕಾಗಿ `ನಾಜಿ ಪರಂಪರೆ~ಯಲ್ಲಿ ಅವರನ್ನು ಆರ್‌ಎಸ್‌ಎಸ್ `ಅತ್ಯುತ್ತಮವಾಗಿ ತರಬೇತುಗೊಳಿಸಿದೆ~ ಎಂದು ಟೀಕಿಸಿದ್ದಾರೆ.

 ವೆಚ್ಚ ತಿಳಿಸಲು ಬಿಜೆಪಿ ಆಗ್ರಹ: ಸರ್ಕಾರದ ಬೊಕ್ಕಸದಿಂದ ಯುಪಿಎ ಅಧ್ಯಕ್ಷೆ ಸೋನಿಯಾ ಅವರ ಪ್ರವಾಸ ಹಾಗೂ ಚಿಕಿತ್ಸೆಗೆ ವೆಚ್ಚ ಮಾಡಿರುವುದು ಸ್ಪಷ್ಟವಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾತನಾಡುವ ಮೂಲಕ ಕಾಂಗ್ರೆಸ್ ಗಮನವನ್ನು ಬೇರೆಡೆ ಸೆಳೆಯುತ್ತಿದೆ ಎಂದು ಬಿಜೆಪಿ ಹೇಳಿದೆ.

`ಮೋದಿ ಎತ್ತಿರದ ವಿಷಯದ ಹೊರತಾಗಿ ಗಮನವನ್ನು ಬೇರೆಡೆ ಸೆಳೆಯುವ ಹಾಗೂ ಬೇರೆ ವಿಷಯವನ್ನು ಸೇರಿಸುವ ಕಾಂಗ್ರೆಸ್ ಕ್ರಮವನ್ನು ನಾವು ಖಂಡಿಸುತ್ತೇವೆ. ಮೋದಿ ತುಂಬಾ ಸ್ಪಷ್ಟವಾಗಿ ಪ್ರಶ್ನೆಯನ್ನು ಎತ್ತಿದ್ದಾರೆ ಮತ್ತು ಮಾಧ್ಯಮದ ಮೂಲವನ್ನು ಉಲ್ಲೇಖಿಸಿದ್ದಾರೆ. ಒಂದು ವೇಳೆ ನಿಮಗೆ ಪ್ರಶ್ನೆಗೆ ಉತ್ತರಿಸುವ ನೈಜ ಆಸಕ್ತಿ ಇದ್ದರೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬುದನ್ನು ತಿಳಿಸಿ~ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವೆಚ್ಚ ಬಹಿರಂಗವಾಗಲಿ: ಬಿಜೆಪಿ
ಗಾಂಧಿನಗರ ವರದಿ: ಸೋನಿಯಾ ಅವರ ವಿದೇಶ ಪ್ರವಾಸಕ್ಕೆ ಮಾಡಿರುವ ವೆಚ್ಚವನ್ನು ಸರ್ಕಾರ ಬಹಿರಂಗಪಡಿಸಲಿ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಒತ್ತಾಯಿಸ್ದ್ದಿದಾರೆ.

`ಸೋನಿಯಾ ವಿದೇಶ ಪ್ರವಾಸಗಳ ವೆಚ್ಚದ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿ ಮೂರು ವರ್ಷಗಳಾದರೂ ನೀಡಲಾಗಿಲ್ಲ~ ಎಂದು ಇಲ್ಲಿ ಸೇರಿದ್ದ ಯುವಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಿಸ್ಸಾರ್‌ನ ಯುವಕರು ಮಾಹಿತಿ ಹಕ್ಕು ಕಾಯ್ದೆಯಡಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಸರ್ಕಾರವನ್ನು ಕೋರಿ ಮೂರು ವರ್ಷಗಳಾದವು. ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಮೂರು ತಿಂಗಳ ಒಳಗೆ ಮಾಹಿತಿ ನೀಡಬೇಕು. ಆದರೆ ಮೂರು ವರ್ಷಗಳಾಗಿವೆ ಮತ್ತು ಮಾಹಿತಿ ಇನ್ನೂ ದೊರಕಿಲ್ಲ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.