ADVERTISEMENT

ಮೋದಿ ಪ್ರಧಾನಿ ಅಭ್ಯರ್ಥಿಯಾಗಲಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಬಿಜೆಪಿಯಲ್ಲಿ ತಳಮಳ ಹುಟ್ಟಿಸುವಂತೆ ರಾಂ ಜೇಠ್ಮಲಾನಿ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮತದಾರರಿಗೆ ಬಿಜೆಪಿಯ ಮೇಲೆ ಭರವಸೆ ಹುಟ್ಟುವಂತೆ ಮಾಡಲು 2014ರ ಚುನಾವಣೆಗೂ ಮುನ್ನ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಹೆಸರಿಸಬೇಕು ಎಂದು ಜೇಠ್ಮಲಾನಿ ಈ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ. `ಪ್ರಧಾನಿ ಅಭ್ಯರ್ಥಿಯ ಆಯ್ಕೆ ಅಷ್ಟೇನೂ ಕಷ್ಟಕರವಾದುದ್ದಲ್ಲ. ನರೇಂದ್ರ ಮೋದಿ ಅವರ ಆಡಳಿತ ಸಾಮರ್ಥ್ಯ ಹಾಗೂ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವಂತೆಯೇ ಇಲ್ಲ~ ಎಂದು ತಮ್ಮ ಎರಡು ಪುಟಗಳ ಪತ್ರದಲ್ಲಿ ಜೇಠ್ಮಲಾನಿ ಹೇಳಿದ್ದಾರೆ.

ಪ್ರಧಾನಿ ಸ್ಥಾನದ ಮೇಲೆ ಕಣ್ಣಿಟ್ಟ ಹಲವರು ಪಕ್ಷದಲ್ಲಿ ಇರುವುದರಿಂದ ಬಿಜೆಪಿ ಈ ವಿಚಾರವನ್ನು ಸದ್ಯ ನೆನೆಗುದಿಯಲ್ಲಿ ಇಟ್ಟಿದೆ. ಮೋದಿ ಪರವಾಗಿ ಮಾತನಾಡಿರುವ ಜೇಠ್ಮಲಾನಿ, `ಮೋದಿ ಅವರಿಗೆ ಅಲ್ಪಸಂಖ್ಯಾತ ವಿರೋಧಿ ಎಂಬ ಹಣೆಪಟ್ಟಿ ಹಚ್ಚಲಾಗಿದೆ. ಈ ಕಪ್ಪುಚುಕ್ಕೆಯನ್ನು ಸುಲಭವಾಗಿ ಅಳಿಸಿಹಾಕಬಹುದು. ಪ್ರಧಾನಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅಭ್ಯರ್ಥಿಗಳೆಲ್ಲ ಆತ್ಮಾವಲೋಕನ ಮಾಡಿಕೊಂಡು ತಾವು ಈ ಸ್ಥಾನಕ್ಕೆ ಅರ್ಹರಾಗಿಲ್ಲ ಎಂಬುದನ್ನು ಕಂಡುಕೊಳ್ಳಬೇಕು~ ಎಂದು ತಿಳಿಸಿದ್ದಾರೆ.

ಪ್ರಧಾನಿ ಸ್ಥಾನದ ಸ್ಪರ್ಧೆಯಲ್ಲಿ ಗಡ್ಕರಿ ಸಹ ಇದ್ದಾರೆಯೇ ಎಂಬ ಪ್ರಶ್ನೆಗೆ, `ವೈಯಕ್ತಿಕವಾಗಿ ನಾನು ಮೋದಿ ಅವರಿಗೆ ಮತ ಹಾಕುತ್ತೇನೆ~ ಎಂದರು.

`ದಕ್ಷತೆ ಹಾಗೂ ಪ್ರಾಮಾಣಿಕತೆಯ ವಿಚಾರ ಬಂದಾಗ ನರೇಂದ್ರ ಮೋದಿ ಹಲವು ನಾಯಕರಿಗಿಂತ ಎತ್ತರದಲ್ಲಿ ಇದ್ದಾರೆ~ ಎಂದೂ ಅಭಿಪ್ರಾಯ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.