ADVERTISEMENT

ಮೋದಿ ಭೇಟಿಗೆ ಅವಕಾಶ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

ಅಹಮದಾಬಾದ್‌ (ಪಿಟಿಐ, ಐಎಎನ್‌ಎಸ್‌): ಗುಜರಾತ್‌ ರಾಜ್ಯ­ದಲ್ಲಿ ಭ್ರಷ್ಟಾಚಾರ ಹಾಗೂ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ಅರ­ವಿಂದ ಕೇಜ್ರಿವಾಲ್‌ ಆರೋಪಿಸಿದ ಬೆನ್ನಲ್ಲೇ, ಮುಖ್ಯಮಂತ್ರಿ ನರೇಂದ್ರ ಮೋದಿ ಭೇಟಿಗೆ ತೆರಳುತ್ತಿದ್ದ ಅವರನ್ನು ಪೊಲೀ­­ಸರು ತಡೆದ ಪ್ರಸಂಗ ಶುಕ್ರವಾರ ಇಲ್ಲಿ ನಡೆಯಿತು.

ಗುಜರಾತ್‌ನಲ್ಲಾದ ಅಭಿವೃದ್ಧಿ ಕಾರ್ಯ­ಗಳನ್ನು ‘ಅಧ್ಯಯನ’ ನಡೆಸಲು ಎಎಪಿ ಮುಖಂಡರು ರಾಜ್ಯ ಪ್ರವಾಸ ಕೈಗೊಂ­ಡಿದ್ದು, ಇಲ್ಲಿಯ ಮೋದಿ ನಿವಾ­ಸಕ್ಕೆ ತೆರಳುತ್ತಿದ್ದರು. ಕೇಜ್ರಿವಾಲ್‌ ಹಾಗೂ ಅವರ ಪಕ್ಷದ ಇತರ ನಾಯಕರ ವಾಹ­ನಗಳನ್ನು ತಡೆದ ಪೊಲೀಸರು, ಮೋದಿ ಅವರ ಭೇಟಿಗೆ ಅನುಮತಿ ಪಡೆ­ಯ­ಲಾಗಿದೆಯೇ ಎನ್ನುವು­ದನ್ನು ವಿಚಾರಿ­ಸಿ­ದರು. ಈ ಸಂದರ್ಭದಲ್ಲಿ ಅನು­ಮತಿ­ಗಾಗಿ ಎಎಪಿ ನಾಯಕ ಮನೀಷ್‌ ಸಿಸೋ­ಡಿಯ ಮೋದಿ ನಿವಾಸಕ್ಕೆ ತೆರಳಿದರೆ ಇತ್ತ ಕೇಜ್ರಿವಾಲ್‌ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ಆರಂಭಿಸಿದರು.

‘ನಾವು ಕೂಡಾ ಸಾಮಾನ್ಯ ಜನರೇ. ಪ್ರಧಾನಿಯಾಗುವ ಕನಸು ಕಾಣುತ್ತಿರುವ ವ್ಯಕ್ತಿ ನಮ್ಮನ್ನು ಭೇಟಿ ಮಾಡಲು ಇಷ್ಟಪಡಲಾರರೇ, ಹಾಗಾದರೆ ನಾವೇನು ಮಾಡಬೇಕು’ ಎಂದು ಕೇಜ್ರಿವಾಲ್‌ ಪ್ರಶ್ನಿಸಿದರು. ಮೋದಿ ಬೆಂಬಲಿಗರ ಪ್ರತಿಭಟನೆಯ ನಡು­ವೆಯೂ ರಾಜ್ಯದ ಹಲವು ಪ್ರದೇಶ­ಗಳಿಗೆ ಭೇಟಿ ನೀಡಿದ ಎಎಪಿ ಮುಖಂಡರು, ರಾಜ್ಯ ಸರ್ಕಾರದ ಕಾರ್ಯ­ವೈಖರಿಯ ಬಗ್ಗೆ ಜನಾ­ಭಿಪ್ರಾಯ ಸಂಗ್ರಹಿಸಿದರು.

ಮೋದಿ ಹೇಳುವುದೆಲ್ಲ ಹಸಿ ಸುಳ್ಳು
‘ಅಭಿವೃದ್ಧಿ ಕುರಿತು ಗುಜರಾತ್‌ ಮುಖ್ಯಮಂತ್ರಿ ಹಸಿ ಸುಳ್ಳು ಹೇಳುತ್ತಿ­ದ್ದಾರೆ, ನಾನು ಈ ಸಂಬಂಧ 16 ಪ್ರಶ್ನೆಗಳನ್ನು ಸಿದ್ಧಮಾಡಿಕೊಂಡಿದ್ದು ಇವುಗ­ಳಿಗೆ ಅವರು ಉತ್ತರ ನೀಡಬೇಕು’ ಎಂದು ಕೇಜ್ರಿವಾಲ್‌ ಒತ್ತಾಯಿಸಿದರು.ಎಲ್ಲೆಡೆ ಪ್ರತಿ ಯೂನಿಟ್‌ಗೆ ಸೌರ ವಿದ್ಯುತ್‌ ದರ ₨ 8 ಇದೆ, ಆದರೆ ಗುಜ­­ರಾತ್‌ ಸರ್ಕಾರ ಯೂನಿಟ್‌ಗೆ ₨ 15 ಪಾವತಿಸುತ್ತಿದೆ.

ಉದ್ಯೋಗ ಹಾಗೂ ಬಿಪಿಎಲ್‌ ಚೀಟಿಗಳನ್ನು ಪಡೆ­­ಯಲು ಜನ ಲಂಚ ಕೊಡ­ಬೇಕಾ­­ಗಿದೆ, ಭ್ರಷ್ಟಾಚಾರದ ಬಗ್ಗೆ ಜನ ಅಸಮಾಧಾನ­ಗೊಂಡಿ­ದ್ದಾರೆ ಎಂದರು. ಗಣಿ ಹಗರಣದ ಆರೋಪಿ ಬಾಬು ಬೊಖಿರಿಯಾ, ಮೀನು­­ಗಾರಿಕೆ ಹಗರಣದ ಆರೋಪಿ ಪುರು­­ಷೋತ್ತಮ ಸೋಲಂಕಿ ಅವ­ರನ್ನು ಸಂಪುಟಕ್ಕೆ ಸೇರಿಸಿ­ಕೊಂಡಿ­ರುವ ಮೋದಿ ಕ್ರಮ­ವನ್ನು ಕೇಜ್ರಿವಾಲ್‌ ಕಟುವಾಗಿ ಟೀಕಿಸಿದ್ದಾರೆ.  ‘ತಾವು ಭೇಟಿ ನೀಡಿದ ಕೆಲವು ಕಡೆ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯ­ವಾ­ಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.