ADVERTISEMENT

ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭಾರತ ದೈತ್ಯ ಕಪ್ಪು ರಂಧ್ರವಾಗಿತ್ತೇ?- ಸೋನಿಯಾಗಾಂಧಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 14:52 IST
Last Updated 9 ಮಾರ್ಚ್ 2018, 14:52 IST
ಸೋನಿಯಾ
ಸೋನಿಯಾ   

ಮುಂಬೈ: ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭಾರತ ದೈತ್ಯ ಕಪ್ಪು ರಂಧ್ರವಾಗಿತ್ತೇ? ಎಂದು ಕಾಂಗ್ರೆಸ್ ನೇತಾರೆ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ. ಶುಕ್ರವಾರ ಇಂಡಿಯಾ ಟು ಡೇ ಸಮಾವೇಶದಲ್ಲಿ ಮಾತನಾಡಿದ ಅವರು  ಈ ಹಿಂದಿನ ಸರ್ಕಾರಗಳು ದೇಶದಲ್ಲಿ ಏನೂ ಮಾಡಿಲ್ಲ ಎಂಬ ಬಿಜೆಪಿಯ ವಾದ ಜನರ ನೆನಪಿನ ಶಕ್ತಿಯನ್ನು ಲೇವಡಿ ಮಾಡುವಂತಿದೆ ಎಂದಿದ್ದಾರೆ.

2014 ಮೇ 16ಕ್ಕಿಂತ ಮುನ್ನ ಇಲ್ಲಿ ಏನೂ ಇರಲಿಲ್ಲವೇ? ಭಾರತ ದೈತ್ಯ ಕಪ್ಪು ರಂಧ್ರ ಮಾತ್ರವಾಗಿತ್ತೇ? ನಾವೇ ಎಲ್ಲವನ್ನೂ ಮಾಡಿದ್ದು ಎಂಬ ವಾದ ಜನರ ಜಾಣ್ಮೆ ಬಗ್ಗೆ ಅನುಮಾನ ವ್ಯಕ್ತಪಡಿಸಿದಂತೆ ಅಲ್ಲವೇ? ಎಂದು ಸೋನಿಯಾ ಪ್ರಶ್ನಿಸಿದ್ದಾರೆ.

70 ವರ್ಷಗಳಿಂದ ಕಾಂಗ್ರೆಸ್ ದೇಶಕ್ಕಾಗಿ ಏನೂ ಮಾಡಿಲ್ಲ ಎಂಬ ಬಿಜೆಪಿಯ ಆರೋಪಗಳಿಗೆ ಸೋನಿಯಾ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ದೇಶದ ಪ್ರಗತಿಗಾಗಿ ಏನಾದರೂ ಮಾಡಿದೆ ಎಂಬ ಹೊಗಳಿಕೆ ಗಳಿಸುವುದಕ್ಕಾಗಿ ನಾನು ಈ ರೀತಿ ಹೇಳುತ್ತಿಲ್ಲ. ಕಳೆದ ದಶಕಗಳಲ್ಲಿ ಭಾರತ ಸಾಧಿಸಿದ ಸಾಧನೆ ಮತ್ತು ಪರಿಶ್ರಮಗಳ ಬಗ್ಗೆ ಅರಿವು ಇರಬೇಕು ಎಂಬುದನ್ನು ತಿಳಿಸುವುದಕ್ಕಾಗಿ ನಾನು ಈ ಮಾತು ಹೇಳಿದೆ.

ADVERTISEMENT

2014 ಮೇ 16 ನಂತರ ಭಾರತದ ಸಂವಿಧಾನವೇ ಬುಡಮೇಲು ಆದಂತೆ ಇದೆ ಎಂದು ಸೋನಿಯಾ ಆರೋಪಿಸಿದ್ದಾರೆ.ಸಂವಿಧಾನವನ್ನೇ ಬುಡಮೇಲು ಮಾಡುವ ಹಲವಾರು ಕೆಲಸಗಳು ಇಲ್ಲಿ ನಡೆದವು. ಇದೆಲ್ಲವೂ ಪೂರ್ವಯೋಜಿತ ಕೃತ್ಯಗಳಾಗಿವೆ. ಭಯ ಹುಟ್ಟಿಸಿ ಅಧಿಪತ್ಯ ಸ್ಥಾಪಿಸುವ ಹುನ್ನಾರವನ್ನು ಅವರು ಮಾಡುತ್ತಿದ್ದಾರೆ ಎಂದು ಸೋನಿಯಾ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.