ADVERTISEMENT

ಮೌನ ಮುರಿದ ನ್ಯಾಯಮೂರ್ತಿ ಗಂಗೂಲಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST
ಮೌನ ಮುರಿದ ನ್ಯಾಯಮೂರ್ತಿ ಗಂಗೂಲಿ
ಮೌನ ಮುರಿದ ನ್ಯಾಯಮೂರ್ತಿ ಗಂಗೂಲಿ   

ಕೋಲ್ಕತ್ತ (ಪಿಟಿಐ): ವಿವಾದ ಮತ್ತಷ್ಟು ಭುಗಿಲೇಳುವುದು ಬೇಡ ಎಂದು ಮಾನವ ಹಕ್ಕು ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ  ಸುಪ್ರೀಂಕೋರ್ಟ್‌ ನಿವೃತ್ತ ನ್ಯಾ. ಎ.ಕೆ. ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆಯ ನಂತರ ಇದೇ ಮೊದಲ ಬಾರಿಗೆ ಮೌನ ಮುರಿದಿ­ರುವ ಅವರು, ರಾಜೀನಾಮೆ ಮತ್ತು ಅದಕ್ಕೆ ಕಾರಣವಾದ  ಅಂಶಗಳನ್ನು ಸುದ್ದಿ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ವಿರುದ್ಧದ ಲೈಂಗಿಕ ಕಿರುಕುಳ  ಆರೋಪವನ್ನು  ಸಾರಾಸಗಟಾಗಿ ತಳ್ಳಿ ಹಾಕಿರುವ ಅವರು, ತಮ್ಮ ಬೆನ್ನುಬಿದ್ದಿ­ರುವ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

ರಾಜ್ಯಪಾಲರಿಗೆ ಸಲ್ಲಿಸಿದ ರಾಜೀ­ನಾಮೆ ಪತ್ರದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವ ಅವರು, ತಮ್ಮನ್ನು ಪದ­ಚ್ಯುತಗೊಳಿಸಲು ರಾಷ್ಟ್ರಪತಿಗೆ ಕೇಂದ್ರ ಸಂಪುಟ ಮಾಡಿರುವ ಶಿಫಾರ­ಸ್ಸಿನ ಕಾರಣಗಳು ಆಧಾರರಹಿತ ಮತ್ತು ತಪ್ಪು ಕಲ್ಪನೆಯಿಂದ ಕೂಡಿವೆ ಎಂದು ಆರೋಪಿಸಿದ್ದಾರೆ.

ಜನವರಿ 6ರಂದು ರಾಜ್ಯಪಾಲರಿಗೆ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಸುದ್ದಿ  ಸಂಸ್ಥೆಯ ವರದಿಗಾರರಿಗೆ ದೂರವಾಣಿ ಯಲ್ಲಿ ಗಂಗೂಲಿ ಸಂಪೂರ್ಣವಾಗಿ ಓದಿ ಹೇಳಿದ್ದು, ಅದರ ಪರಿಪಾಠ ಇಲ್ಲಿದೆ. 

‘ನನ್ನ ಕುಟುಂಬದ ಸದಸ್ಯರ ಸಂತೋಷ ಮತ್ತು ನೆಮ್ಮದಿ ಹಾಗೂ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನದ ಘನತೆ, ಗೌರವವನ್ನು  ದೃಷ್ಟಿಯಲ್ಲಿಟ್ಟುಕೊಂಡು  ರಾಜೀನಾಮೆ ಸಲ್ಲಿಸುವ ನಿರ್ಧಾರ ಕೈಗೊಂಡೆ’ 

‘ನಾನು  ಹುದ್ದೆಗಳಿಗೆ ಅಂಟಿಕೊಂಡು ಕುಳಿತವನಲ್ಲ. ಆ ಹುದ್ದೆಗೆ ಘನತೆ ಮತ್ತು ಗೌರವ ರೀತಿಯಲ್ಲಿ ಕೆಲಸ ಮಾಡು­ವುದು ನನ್ನ ಜಾಯಮಾನ. ಸದ್ಯದ ಸ್ಥಿತಿ­ಯಲ್ಲಿ ನಾನು ಅಲಂಕರಿಸಿದ ಹುದ್ದೆಗೆ ನ್ಯಾಯ ಸಲ್ಲಿಸುವುದು  ಸಾಧ್ಯವಿಲ್ಲ. ಹೀಗಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ 

‘ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ­ದವರ ಮೇಲೆ ದ್ವೇಷವಿಲ್ಲ. ಜೀವನದಲ್ಲಿ ಅವರಿಗೆ ಒಳ್ಳೆಯದಾಗಲಿ ಎಂದು  ಹಾರೈಸುವೆ’

ರಾಜೀನಾಮೆ ಅಂಗೀಕಾರ
ಎ.ಕೆ. ಗಂಗೂಲಿ, ಸೋಮವಾರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ ರಾಜೀನಾಮೆ  ಅಂಗೀಕಾರವಾಗಿದೆ.

ರಾಜೀನಾಮೆ ಅಂಗೀಕರಿಸಿರುವ ರಾಜ್ಯಪಾಲರು, ಈ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೂ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಗಂಗೂಲಿ ಮಂಗಳ ವಾರ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿಗೆ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT