ADVERTISEMENT

ಮ್ಯಾನ್ಮಾರ್‌, ಬಾಂಗ್ಲಾ ಗಡಿಯಲ್ಲಿ ಎರಡು ವಲಸೆ ತಪಾಸಣಾ ಠಾಣೆ

ಪಿಟಿಐ
Published 2 ಅಕ್ಟೋಬರ್ 2017, 8:53 IST
Last Updated 2 ಅಕ್ಟೋಬರ್ 2017, 8:53 IST
ಮ್ಯಾನ್ಮಾರ್‌, ಬಾಂಗ್ಲಾ ಗಡಿಯಲ್ಲಿ ಎರಡು ವಲಸೆ ತಪಾಸಣಾ ಠಾಣೆ
ಮ್ಯಾನ್ಮಾರ್‌, ಬಾಂಗ್ಲಾ ಗಡಿಯಲ್ಲಿ ಎರಡು ವಲಸೆ ತಪಾಸಣಾ ಠಾಣೆ   

ನವದೆಹಲಿ: ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶದೊಂದಿಗೆ ಹಂಚಿಕೊಂಡಿರುವ ಗಡಿಗಳಲ್ಲಿ ಭಾರತವು ಎರಡು ಹೊಸ ವಲಸೆ ತಪಾಸಣಾ ಠಾಣೆಗಳನ್ನು ತೆರೆದಿದೆ.

ಈ ಸಂಬಂಧ, ಕೇಂದ್ರ ಗೃಹ ಸಚಿವಾಲಯವು ಪ್ರತ್ಯೇಕ ಗೆಜೆಟ್‌ ಅಧಿಸೂಚನೆಗಳನ್ನು ಹೊರಡಿಸಿದೆ. ಎರಡೂ ಠಾಣೆಗಳು ಮಿಜೋರಾಂನಲ್ಲಿವೆ.

‘ಮಿಜೋರಾಂನ ಲೌಂಗ್‌ಟ್ಲಾಯಿ ಜಿಲ್ಲೆಯಲ್ಲಿರುವ ಝೊರಿನ್‌ಪುಯಿ ತಪಾಸಣಾ ಠಾಣೆಯನ್ನು ಅಧಿಕೃತ ವಲಸೆ ಪರಿಶೀಲನಾ ಠಾಣೆಯಾಗಿ ಕೇಂದ್ರ ಸರ್ಕಾರ ಗುರುತಿಸಿದೆ. ಅಗತ್ಯ ದಾಖಲೆಗಳನ್ನು ಹೊಂದಿರುವ, ಮ್ಯಾನ್ಮಾರ್‌ನಿಂದ ಭಾರತಕ್ಕೆ ಬರುವ ಮತ್ತು ಭಾರತದಿಂದ ಮ್ಯಾನ್ಮಾರ್‌ಗೆ ಹೋಗುವ ಎಲ್ಲ ಪ್ರಯಾಣಿಕರು ಈ ಠಾಣೆಯ ಮೂಲಕ ಸಂಚರಿಸಬಹುದು’ ‌ಎಂದು  ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಲಾಗಿದೆ.

ADVERTISEMENT

ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಮಿಜೋರಾಂನ ಲುಂಗ್ಲಿ ಜಿಲ್ಲೆಯಲ್ಲಿರುವ ಕಾವ್ರ್‌ಪ್ಯುಚ್ಚುದಲ್ಲಿ ಅಧಿಕೃತ ವಲಸೆ ಠಾಣೆಯನ್ನು ಗುರುತಿಸಲಾಗಿದೆ ಎಂದು ಮತ್ತೊಂದು ಅಧಿಸೂಚನೆಯಲ್ಲಿ ಗೃಹ ಸಚಿವಾಲಯ ಹೇಳಿದೆ.

ತೀರಾ ಒಳಪ್ರದೇಶವಾದ ಝೊರಿನ್‌ಪುಯಿಯು ಮ್ಯಾನ್ಮಾರ್‌ನ ಸಿಟ್ವೆ ಬಂದರಿನಿಂದ 287 ಕಿ.ಮೀ ದೂರದಲ್ಲಿದೆ. ಕಲಾದಾನ್‌ ಬಹುಮಾದರಿ ಯೋಜನೆಗಾಗಿ ಈ ಜಾಗವನ್ನು ಹೊಸ ಗಡಿ ಠಾಣೆಗೆ ಆಯ್ಕೆ ಮಾಡಲಾಗಿದೆ.

ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು 2012ರಲ್ಲಿ ಮ್ಯಾನ್ಮಾರ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ಝೊರಿನ್‌ಪುಯಿ ಕುರಿತ ಒಪ್ಪಂದದ ಬಗ್ಗೆ ಉಲ್ಲೇಖ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.