ADVERTISEMENT

ಯಾತ್ರಿಕರ ಮೇಲಿನ ದಾಳಿಗೆ ವ್ಯಾಪಕ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
ಯಾತ್ರಿಕರ ಮೇಲಿನ ದಾಳಿಗೆ ವ್ಯಾಪಕ ಖಂಡನೆ
ಯಾತ್ರಿಕರ ಮೇಲಿನ ದಾಳಿಗೆ ವ್ಯಾಪಕ ಖಂಡನೆ   

ನವದೆಹಲಿ/ ಶ್ರೀನಗರ:  ಅಮರನಾಥ ಯಾತ್ರಿಕರ ಮೇಲೆ ನಡೆದ ಭಯೋತ್ಪಾದನಾ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಭಯೋತ್ಪಾದಕರು ನಡೆಸಿರುವ ಹೀನ ಕೃತ್ಯದ ವಿರುದ್ಧ ಪಕ್ಷ, ಧರ್ಮ ಭೇದ ಮರೆತು ದೇಶ ವಿದೇಶದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಇಂಟರ್‌ನೆಟ್‌ ಬಳಕೆದಾರರು ತಮ್ಮ ಆಕ್ರೋಶವನ್ನು ಹೊರಹಾಕಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡಿದ್ದಾರೆ.

ನೆರೆಯ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ, ಭೂತಾನ್‌, ಬಾಂಗ್ಲಾದೇಶಗಳೂ ದಾಳಿಯನ್ನು ಖಂಡಿಸಿವೆ.
ಸಾಮರಸ್ಯ ಸಂಸ್ಕೃತಿ ಮೇಲೆ ನಡೆದ ದಾಳಿ: ಉಗ್ರರ ಹೀನ ಕೃತ್ಯದ ಖಂಡನಾ ನಿರ್ಣಯ ಅಂಗೀಕರಿಸಿರುವ ಜಮ್ಮು ಮತ್ತು ಕಾಶ್ಮೀರದ ಸಚಿವ ಸಂಪುಟ, ಇದು ರಾಜ್ಯದ ವಿವಿಧ ಧರ್ಮಗಳ ನಡುವೆ ಇರುವ ಸಾಮರಸ್ಯ ಸಂಸ್ಕೃತಿ ಮತ್ತು  ಬಹುತ್ವದ ಮೌಲ್ಯಗಳ ಮೇಲೆ ನಡೆದ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮಂಗಳವಾರ ನಡೆದ ತುರ್ತು ಸಚಿವ ಸಂಪುಟ ಸಭೆಯು, ದಾಳಿಯಲ್ಲಿ ಜೀವ ಹಾನಿಯಾಗಿರುವ ಬಗ್ಗೆ ತೀವ್ರ ನೋವನ್ನು ವ್ಯಕ್ತಪಡಿಸಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ  ಎಂದು ಪ್ರಾರ್ಥಿಸಿ, ನಿರ್ಣಯ ಅಂಗೀಕರಿಸಿತು ಎಂದು ಅಧಿಕೃತ ವಕ್ತಾರರು ಹೇಳಿದ್ದಾರೆ.

ADVERTISEMENT

ತಲೆ ತಗ್ಗಿಸುವಂತೆ ಮಾಡಿದೆ: ‘ಭಯೋತ್ಪಾದಕರ ದಾಳಿಯು ಕಾಶ್ಮೀರದ ವಿಶಿಷ್ಟ ಸಂಸ್ಕೃತಿಯ ಭವ್ಯಮಹಲಿನ ಅಡಿಪಾಯವನ್ನು ಅಲುಗಾಡಿಸಿದೆ. ಈ ಕೃತ್ಯವು ಎಲ್ಲ ಮುಸ್ಲಿಮರು ಮತ್ತು ಕಾಶ್ಮೀರಿಗಳಿಗೆ ಕಳಂಕ ತಂದಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ದಾಳಿ ನಡೆದ ಸುದ್ದಿ ತಿಳಿಯುತ್ತಲೇ ಅನಂತನಾಗ್‌ಗೆ ಧಾವಿಸಿದ್ದ ಮೆಹಬೂಬಾ ಇಡೀ ರಾತ್ರಿ, ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿ ಕಳೆದಿದ್ದರು.

ಮಂಗಳವಾರ ಅವರು ದಾಳಿಯಲ್ಲಿ ಸಾವಿಗೀಡಾದವರಿಗೆ ಪುಷ್ಪ ನಮನ ಸಲ್ಲಿಸಿದರು. ಅವರ ಜೊತೆ ಉಪಮುಖ್ಯಮಂತ್ರಿ ನಿರ್ಮಲ್‌ ಸಿಂಗ್‌ ಕೂಡ ಇದ್ದರು.
ಶ್ರೀನಗರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಅವರು ಸಂತ್ರಸ್ತರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ದಾಳಿಕೋರರು ಮುಸ್ಲಿಮರಲ್ಲ: ಅಮರನಾಥ ಯಾತ್ರಿಗಳ ಮೇಲೆ ನಡೆದಿರುವ ದಾಳಿಗೆ ದೇಶದ ಜನರ ಕ್ಷಮೆ ಕೇಳಿರುವ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ, ‘ಮುಗ್ಧರ ಮೇಲೆ ಗುಂಡಿಕ್ಕಿದವರು ಮುಸ್ಲಿಮರಲ್ಲ’ ಎಂದು ಹೇಳಿದ್ದಾರೆ.

‘ನಾವು ಜನರನ್ನು ಕೊಲ್ಲುವವರಲ್ಲ. ನಾವು ಇತರರ ಬಗ್ಗೆ ಹಿಂದೆ ಪ್ರೀತಿ ತೋರಿದ್ದೇವೆ. ಈಗಲೂ ತೋರಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಅಮರನಾಥ ಯಾತ್ರೆಯಲ್ಲಿ ಮುಸ್ಲಿಮರು ವಹಿಸುವ ಪಾತ್ರವನ್ನೂ ಅವರು ಪ್ರಸ್ತಾಪಿಸಿದ್ದಾರೆ.
‘ಇಂದಿಗೂ, ಅಮರನಾಥ ಯಾತ್ರಿಕರ ಸಾಮಾನು ಸರಂಜಾಮುಗಳನ್ನು ಹೊತ್ತುಕೊಳ್ಳುವುದು ಕಾಶ್ಮೀರ ಮುಸ್ಲಿಮರೇ. ಯಾತ್ರಿಕರನ್ನು ಕುದುರೆಯಲ್ಲಿ ಕೂರಿಸಿಕೊಂಡು ಕರೆದೊಯ್ಯುವವನೂ ಕಾಶ್ಮೀರ ಮುಸ್ಲಿಮನೇ ಆಗಿದ್ದಾನೆ’ ಎಂದು ಅವರು ಹೇಳಿದ್ದಾರೆ.

ದಾಳಿಯಿಂದ ಇಡೀ ಕಾಶ್ಮೀರಕ್ಕೆ ನೋವಾಗಿದೆ. ದಾಳಿಕೋರರು ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಬಯಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಪ್ರತ್ಯೇಕತಾವಾದಿ ಮುಖಂಡರಾದ ಸೈಯದ್‌ ಅಲಿ ಗಿಲಾನಿ, ಮೀರ್‌ವೈಜ್‌ ಉಮರ್‌ ಮತ್ತು ಯಾಸಿನ್‌ ಮಲಿಕ್‌ ಕೂಡ ಯಾತ್ರಾರ್ಥಿಗಳ ಹತ್ಯೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
‘ಇದು ಕಾಶ್ಮೀರಿ ಮನಸ್ಥಿತಿಗೆ ವಿರುದ್ಧವಾದುದು. ಶತಮಾನಗಳಿಂದ ಈ ಯಾತ್ರೆ ಶಾಂತಿಯುತವಾಗಿ ನಡೆಯುತ್ತಿದೆ. ವಾರ್ಷಿಕವಾಗಿ ನಡೆಯುವ ಸಾಮರಸ್ಯದ ಈ ಯಾತ್ರೆ ಮುಂದೆಯೂ ನಡೆಯಲಿದೆ’ ಎಂದು ಅವರು ಹೇಳಿದ್ದಾರೆ.

ಭದ್ರತೆ ಪರಿಶೀಲನೆ ನಡೆಸಿದ ರಾಜನಾಥ್‌

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರ ಮಂಗಳವಾರ ಪರಿಶೀಲನೆ ನಡೆಸಿತು. ಭದ್ರತೆಯಲ್ಲಿನ ಲೋಪಗಳನ್ನು ಸರಿಪಡಿಸುವಂತೆ ಅದು ಅಧಿಕಾರಿಗಳಿಗೆ ಸೂಚಿಸಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ರಾಜ್ಯದಲ್ಲಿನ ಸ್ಥಿತಿಗತಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಿಸಿದರು.
ಇದಕ್ಕೂ ಮೊದಲು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ  ಡೊಭಾಲ್‌ ಅವರು  ಕಣಿವೆ ರಾಜ್ಯದ ಸ್ಥಿತಿಗತಿ ಬಗ್ಗೆ, ಅಮರನಾಥ ಯಾತ್ರಿಕರ ಮತ್ತು ರಾಜ್ಯದಲ್ಲಿ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದರು.
ಕಾಶ್ಮೀರಕ್ಕೆ ಕೇಂದ್ರದ ತಂಡ: ಅಮರನಾಥ ಯಾತ್ರೆಗಾಗಿ ಮಾಡಿರುವ ಭದ್ರತಾ ವ್ಯವಸ್ಥೆಯ ಪರಿಶೀಲನೆಗಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್‌ ಅಹಿರ್‌ ನೇತೃತ್ವದ ತಂಡವನ್ನು ಕಾಶ್ಮೀರಕ್ಕೆ ಕಳುಹಿಸಿದೆ.
ಕಾಶ್ಮೀರದಲ್ಲಿ ಸೇನಾ ಮುಖ್ಯಸ್ಥ: ರಾಜ್ಯದಲ್ಲಿನ ಭದ್ರತಾ ಸ್ಥಿತಿ ಪರಿಶೀಲಿಸುವುದಕ್ಕಾಗಿ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಮಂಗಳವಾರ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.
ಅನಂತನಾಗ್‌ನಲ್ಲಿ ಸೋಮವಾರ ರಾತ್ರಿ ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ಕೈಗೊಂಡಿರುವ ಭದ್ರತಾ ವ್ಯವಸ್ಥೆಯ ಬಗ್ಗೆ ಹಿರಿಯ ಸೇನಾಧಿಕಾರಿಗಳು ರಾವತ್‌ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.