ನವದೆಹಲಿ (ಪಿಟಿಐ): ದೇಶದ ವಿವಿಧೆಡೆ ಭಯೋತ್ಪಾದನಾ ದಾಳಿಗೆ ಸಂಚು ರೂಪಿಸಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದೀನ್ ಸಹಸಂಸ್ಥಾಪಕ ಯಾಸೀನ್ ಭಟ್ಕಳ ಮತ್ತು ಆತನ ಇಬ್ಬರು ಸಹಚರರನ್ನು ಏ. 2ರಂದು ತನ್ನೆದುರು ಹಾಜರುಪಡಿಸಲು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ವಿಶೇಷ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ.
ಪ್ರಕರಣದ ರಹಸ್ಯ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಐ.ಎಸ್. ಮೆಹ್ತಾ ಅವರು, ಭಟ್ಕಳ ಮತ್ತು ಆತನ ಸಹಚರರಾದ ಅಸಾದುಲ್ಲಾ ಅಖ್ತರ್ ಹಾಗೂ ಒಬೇದ್ ಉರ್ ರೆಹಮಾನ್ ಅವರನ್ನು ತನ್ನೆದುರು ಹಾಜರುಪಡಿಸುವಂತೆ ವಾರಂಟ್ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಕುರಿತು ಮಂಗಳವಾರ ನಡೆದ ವಿಚಾರಣೆ ವೇಳೆ ಆರೋಪ ಪಟ್ಟಿಯಲ್ಲಿ ಹೆಸರಿಸಲಾದ ಈ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರಲಿಲ್ಲ ಎಂದು ಅವು ಹೇಳಿವೆ. ಭಟ್ಕಳ ಮತ್ತು ಅಖ್ತರ್ ಸದ್ಯ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ವಶದಲ್ಲಿದ್ದರೆ, ಒಬೆದ್ ಉರ್ ರೆಹಮಾನ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರ ವಶದಲ್ಲಿದ್ದಾರೆ ಎನ್ನಲಾಗಿದೆ.
ಪ್ರಕರಣದ ವಿಚಾರಣೆಯನ್ನು ಏ. 2ಕ್ಕೆ ನಿಗದಿಗೊಳಿಸಿರುವ ನ್ಯಾಯಾಲಯವು ಆರೋಪಪಟ್ಟಿ ಮತ್ತು ಅದರೊಂದಿಗೆ ಸಲ್ಲಿಸಿದ ಇತರೆ ದಾಖಲೆಗಳ ಪ್ರತಿಗಳನ್ನು ಆರೋಪಿ ಪರ ವಕೀಲರಿಗೆ ಸಲ್ಲಿಸುವಂತೆ ಎನ್‌ಐಎಗೆ ಸೂಚಿಸಿದೆ. ಎನ್‌ಐಎ ಸಲ್ಲಿಸಿದ 277 ಪುಟಗಳ ಪೂರಕ ಆರೋಪ ಪಟ್ಟಿಯೊಂದಿಗೆ ಸಲ್ಲಿಸಿದ ಇತರ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎಂದು ಆರೋಪಿ ಪರ ವಕೀಲ ನ್ಯಾಯಾಲಯಕ್ಕೆ ತಿಳಿಸಿದರು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.