ADVERTISEMENT

ಯಾಹೂ ವಿರುದ್ಧ ಕ್ರಿಮಿನಲ್ ಖಟ್ಲೆ: ಪ್ರಕ್ರಿಯೆ ತಡೆಗೆ ಹೈಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 9:30 IST
Last Updated 10 ಫೆಬ್ರುವರಿ 2012, 9:30 IST

ನವದೆಹಲಿ (ಪಿಟಿಐ): ಆಕ್ಷೇಪಾರ್ಹ ವಿಷಯ ಪ್ರಕಟಿಸಿದ್ದಕ್ಕಾಗಿ ತನಗೆ ಸಮನ್ಸ್ ಜಾರಿ ಮಾಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಮೇರೆಗೆ ಯಾಹೂ ಇಂಡಿಯಾ ವಿರುದ್ಧದ ಕ್ರಿಮಿನಲ್ ಖಟ್ಲೆ ಪ್ರಕ್ರಿಯೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿತು.

ಯಹೂ ವೆಬ್ ಸೈಟ್ ವಿರುದ್ಧ ಕ್ರಿಮಿನಲ್ ಖಟ್ಲೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಮೂರ್ತಿ ಸುರೇಶ್ ಕೈಟ್ ಅವರು ~ಈ ಹಂತದಲ್ಲಿ~ ಯಾವುದೇ ಆದೇಶ ನೀಡಲು ನಿರಾಕರಿಸಿ ಮಾರ್ಚ್ 1ರಂದು ವಿಚಾರಣೆಗೆ ದಿನ ನಿಗದಿ ಪಡಿಸಿದರು.

~ಮಾರ್ಚ್ 13ರಂದು ವಿಚಾರಣಾ ನ್ಯಾಯಾಲಯವು ಪ್ರಕರಣ ಆಲಿಸುವ ಮುನ್ನ ನಾನು ವಿಷಯವನ್ನು ಆಲಿಸುವೆ~ ಎಂದು ಅವರು ನುಡಿದರು.

ಯಾಹೂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಅರವಿಂದ ನಿಗಮ್ ಅವರು ~ದೂರಿನಲ್ಲಿ ಕಂಪೆನಿಯ ಹೆಸರು ಬಂದಿಲ್ಲ~ ಎಂದು ಪ್ರತಿಪಾದಿಸಿ ವಿಚಾರಣಾ ನ್ಯಾಯಾಲಯದ ಖಟ್ಲೆ ಪ್ರಕ್ರಿಯೆಯನ್ನು ತಡೆ ಹಿಡಿಯಬೇಕು ಎಂದು ಹೈಕೋರ್ಟಿಗೆ ಮನವಿ ಮಾಡಿದರು.

ವಿಚಾರಣಾ ನ್ಯಾಯಾಲಯದಲ್ಲಿನ ಅರ್ಜಿದಾರ ವಿನಯ ರೈ ಅವರು ತಮಗೆ ಇನ್ನೂ ಮೇಲ್ಮನವಿಯ ಪ್ರತಿ ತಲುಪಿಲ್ಲ. ಆದ್ದರಿಂದ ಅದಕ್ಕೆ ಉತ್ತರ ನೀಡಲು ಕಷ್ಟವಾಗುತ್ತದೆ ಎಂಬುದಾಗಿ ತಿಳಿಸಿದ ಬಳಿಕ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

ಇದಕ್ಕೆ ಮುನ್ನ ಆಕ್ಷೇಪಾರ್ಹ ವಿಷಯ ಪ್ರಕಟಿಸಿದ ಆಪಾದನೆಯಲ್ಲಿ ತನಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೂಲಕ ಸಮನ್ಸ್ ಜಾರಿಯಾದುದನ್ನು ಪ್ರಶ್ನಿಸಿ ಯಾಹೂ ಇಂಡಿಯಾ ಸಲ್ಲಿಸಿದ್ದ ಮನವಿ ಮೇರೆಗೆ ಹೈಕೋರ್ಟ್ ಜನವರಿ 20ರಂದು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.