ADVERTISEMENT

ಯುಪಿಎದಲ್ಲಿ ಹೊಸ ಬಿರುಕು

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ನವದೆಹಲಿ (ಪಿಟಿಐ): ಕೇಂದ್ರ ಸಂಪುಟದಲ್ಲಿ ಶರದ್ ಪವಾರ್ ಅವರಿಗೆ ಎರಡನೇ ಸ್ಥಾನ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಜೊತೆ ಮುನಿಸಿಕೊಂಡಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಸರ್ಕಾರದಿಂದ ಹೊರಬರುವ ನಿರ್ಧಾರ ಕೈಗೊಂಡಿದ್ದು, ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಶುಕ್ರವಾರ ಹೇಳಿದೆ. ಇದರಿಂದ ಕೇಂದ್ರ ಆಡಳಿತಾರೂಢ ಯುಪಿಎ ಹೊಸ ಬಿಕ್ಕಟ್ಟಿಗೆ ಸಿಲುಕಿದೆ.

ಕೇಂದ್ರ ಸಂಪುಟದಲ್ಲಿರುವ `ಎನ್‌ಸಿಪಿ~ ಮುಖ್ಯಸ್ಥರೂ ಆಗಿರುವ ಕೃಷಿ ಸಚಿವ ಶರದ್ ಪವಾರ್ ಮತ್ತು ಬೃಹತ್ ಕೈಗಾರಿಕಾ ಖಾತೆ ಸಚಿವ ಪ್ರಫುಲ್ ಪಟೇಲ್ ಅವರು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ವಿಚಾರವನ್ನು ಪ್ರಫುಲ್ ಪಟೇಲ್, ಖುದ್ದಾಗಿ ಪ್ರಧಾನಿ ಸಿಂಗ್ ಅವರಿಗೂ ತಿಳಿಸಿದ್ದಾರೆ.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈ ನಿರ್ಧಾರ  ತಿಳಿಸಿರುವ ಶರದ್ ಪವಾರ್, ಲೋಕಸಭೆಯಲ್ಲಿ ತಮ್ಮ  ಪಕ್ಷದ ಒಂಬತ್ತು ಮತ್ತು ರಾಜ್ಯಸಭೆಯಲ್ಲಿನ ಏಳು ಸದಸ್ಯರು ಯುಪಿಎ ಭಾಗವಾಗಿಯೇ ಇರುತ್ತಾರೆ ಎಂದೂ ಹೇಳಿದ್ದಾರೆ.

ADVERTISEMENT

ಸರ್ಕಾರದಿಂದ ಹೊರ ಬರುವುದಾಗಿ `ಎನ್‌ಸಿಪಿ~ ಗುರುವಾರ ಪತ್ರ ಕಳುಹಿಸಿದ ನಂತರ ಕಾಂಗ್ರೆಸ್, ಮಿತ್ರಪಕ್ಷದ ಮನ ಒಲಿಸಲು ಪ್ರಯತ್ನಿಸುತ್ತಿದೆ.  ಈ ಮಧ್ಯೆ, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಕೆಲವು ಹಿರಿಯ ಸಚಿವರು ಈ ಬೆಳವಣಿಗೆ ಬಗ್ಗೆ ಶುಕ್ರವಾರ ಸಭೆ ಸೇರಿ ಚರ್ಚಿಸಿದ್ದಾರೆ. ಬಿಕ್ಕಟ್ಟನ್ನು ಪರಿಹರಿಸಲಾಗುವುದು ಎಂದೂ ಪಕ್ಷದ ಮೂಲಗಳು ಹೇಳಿವೆ.

ಕೇಂದ್ರ ಸಂಪುಟದಲ್ಲಿ ಪ್ರಧಾನಿ ನಂತರದ ಎರಡನೇ ಸ್ಥಾನವನ್ನು ಪವಾರ್ ಅವರಿಗೆ ನೀಡುವುದು ವಿವಾದವಲ್ಲ. ಪರಸ್ಪರ ಸಹಕಾರದಲ್ಲಿ ತುಸು ಭಿನ್ನಾಭಿಪ್ರಾಯವಿದೆ. ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಿ ಸರಿಮಾಡಿಕೊಳ್ಳಲಾಗುವುದು ಎಂದೂ ಮೂಲಗಳು ಹೇಳಿವೆ.

ಕಳೆದ ಎಂಟು ವರ್ಷಗಳಿಂದ ಕಾಂಗ್ರೆಸ್‌ನ ಸ್ಥಿರ ಮಿತ್ರಪಕ್ಷವಾಗಿಯೇ ಎನ್‌ಸಿಪಿ ಗುರುತಿಸಿಕೊಂಡಿದೆ. ಆದರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಗುರುವಾರ ರಾತ್ರಿ ಪ್ರಧಾನಿ ಮತ್ತು ಸೋನಿಯಾ ಗಾಂಧಿ ಅವರಿಗೆ ತಮ್ಮ ಪಕ್ಷ ಸರ್ಕಾರದಿಂದ ಹೊರಬರುವ ಇಂಗಿತ ವ್ಯಕ್ತಪಡಿಸಿದ ಪತ್ರ ರವಾನಿಸಿದ ನಂತರ ಈ ಬಿಕ್ಕಟ್ಟು ಕಾಣಿಸಿಕೊಂಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲೂ ಪವಾರ್ ಮತ್ತು ಪ್ರಫುಲ್ ಪಟೇಲ್ ಭಾಗವಹಿಸಿರಲಿಲ್ಲ. ಆಗಲೇ ಇವರಿಬ್ಬರೂ ರಾಜೀನಾಮೆ ನೀಡಿದ್ದಾರೆ ಎಂಬ ಊಹಾಪೋಹ ಎದ್ದಿತ್ತು.

`ಚುನಾವಣೆ ಹತ್ತಿರವಾಗುತ್ತಿರುವುದರಿಂದ ಪಕ್ಷ ಸಂಘಟನೆಗೆ ಒತ್ತು ನೀಡಬೇಕಿದೆ. ನಮ್ಮದು ಸಣ್ಣ ಪಕ್ಷವಾಗಿದ್ದು, ಇದನ್ನು ಸದೃಢವಾಗಿ ಬೆಳೆಸಬೇಕಿರುವುದರಿಂದ ಈ ನಿಲುವಿಗೆ ಬರಲಾಗಿದೆ~ ಎಂದು ಪವಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಈ ಪತ್ರ ತಲುಪಿದ ನಂತರ ಪ್ರಧಾನಿ ಸಿಂಗ್ ಅವರು, ಕೂಡಲೇ ಮಾತುಕತೆಗೆ ಬರುವಂತೆ ಪವಾರ್‌ಗೆ ಆಹ್ವಾನ ನೀಡಿದ್ದು, ಅದರಂತೆ ಶುಕ್ರವಾರ ಬೆಳಿಗ್ಗೆ ಸೋನಿಯಾ ಅವರೊಂದಿಗೆ ಸಭೆ ಕೂಡ ನಡೆದಿದೆ.

ಈ ಸಭೆಯಲ್ಲಿ ಪವಾರ್, `ಕಾಂಗ್ರೆಸ್ ತಮ್ಮ ಪಕ್ಷವನ್ನು ಸಂಪರ್ಕಿಸುತ್ತಿಲ್ಲ. ಸಹಕಾರದ ಕೊರತೆ ಇದೆ. ಇಂತಹ ಕೊರತೆಯು ಆಡಳಿತ ಮತ್ತು ಯುಪಿಎ ಮೈತ್ರಿಕೂಟ ಎರಡರಲ್ಲೂ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ~ ಎಂದು ಮೂಲಗಳು ತಿಳಿಸಿವೆ. ಆಹಾರ ಪೂರೈಕೆಗೆ ಅಗತ್ಯಕ್ಕಿಂತ ಹೆಚ್ಚು ಸಬ್ಸಿಡಿ ನೀಡಲಾಗುತ್ತಿದೆ. ಇದೇ ವೇಳೆಗೆ ನೀರಾವರಿ  ಯೋಜನೆಗಳಿಗೆ ಅನುದಾನದ ಕೊರತೆ ಇದೆ ಎಂದೂ ಪವಾರ್ ದೂರಿದ್ದಾರೆ. ಆರ್ಥಿಕವಾಗಿ ಹೊರೆ ಆಗುವಂತಹ ಯಾವುದೇ ಜನಪ್ರಿಯ ಯೋಜನೆಗಳನ್ನು ಮಾಡಬಾರದು ಎಂದೂ ಅವರು ಸಭೆಯಲ್ಲಿ ಕೋರಿದ್ದಾರೆ ಎಂದು ಮೂಲಗಳು ಹೇಳಿವೆ.

`ಸರ್ಕಾರಕ್ಕೆ ಬಹು ದೊಡ್ಡ ಆಸ್ತಿ~

ನವದೆಹಲಿ: `ಎನ್‌ಸಿಪಿ ಮುಖಂಡ ಶರದ್ ಪವಾರ್ ಪ್ರಮುಖ ಸಹೋದ್ಯೋಗಿಯಾಗಿದ್ದು, ಅವರ ಜ್ಞಾನ ಹಾಗೂ ಅನುಭವ ಸರ್ಕಾರಕ್ಕೆ ಬಹು ದೊಡ್ಡ ಆಸ್ತಿ~ ಎಂದು ಪ್ರಧಾನಿ ಮನಮೋಹನ್‌ಸಿಂಗ್ ಹೇಳಿದ್ದಾರೆ.

ಯುಪಿಎ ಮೈತ್ರಿಕೂಟದ ಪ್ರಮುಖ ಅಂಗಪಕ್ಷ ಕಾಂಗ್ರೆಸ್ ಮೇಲೆ ಮುನಿಸಿಕೊಂಡು ಸಂಪುಟ ಸಭೆಗೆ ಗೈರುಹಾಜರಾದ ಶರದ್ ಪವಾರ್ ಜತೆ ಸಿಂಗ್ ಗುರುವಾರ ರಾತ್ರಿ ಮಾತನಾಡಿದರು. ಸಚಿವ ಸಂಪುಟದಲ್ಲಿ ಎರಡನೇ ಸ್ಥಾನ ಸಿಗಲಿಲ್ಲ ಎಂದು ಅಸಮಾಧಾನಗೊಂಡು ಪವಾರ್ ಸಭೆಯಿಂದ ಹೊರಗುಳಿದರು ಎಂದು ಕಾಂಗ್ರೆಸ್ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಪವಾರ್ ಶುಕ್ರವಾರ ಬೆಳಿಗ್ಗೆ ಸೋನಿಯಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅನಂತರ ಯುಪಿಎ ಸರ್ಕಾರ ಮತ್ತು ಮೈತ್ರಿಕೂಟದ ಕಾರ್ಯವೈಖರಿಗೆ ಸಂಬಂಧಿಸಿದಂತೆ ಕೆಲವು ಗಂಭೀರ ಸಮಸ್ಯೆಗಳಿವೆ ಎಂದು ಎನ್‌ಸಿಪಿ ಹೇಳಿದೆ. ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಪ್ರಧಾನಿ ಹೇಳಿಕೆಯೂ ಬಿಡುಗಡೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.