ನವದೆಹಲಿ(ಪಿಟಿಐ): ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತಿತರರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಇದೇ ಮೊದಲ ಬಾರಿಗೆ ಕೇಂದ್ರ ಲೋಕಸೇವಾ ಆಯೋಗ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಿದೆ.
ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪೂರ್ವಭಾವಿ, ಮುಖ್ಯಪರೀಕ್ಷೆ ಹಾಗೂ ಸಂದರ್ಶನದಲ್ಲಿ ಪಡೆಯುವ ಅಂಕಗಳು ಯುಪಿಎಸ್‌ಸಿಯ ವೆಬ್‌ಸೈಟ್
www.upsc.gov.in ನಲ್ಲಿ ಲಭ್ಯವಾಗಲಿದೆ. ಮೂರೂ ಪರೀಕ್ಷೆಗಳಲ್ಲಿ ಅರ್ಹತೆ ಹೊಂದದ ಅಭ್ಯರ್ಥಿಗಳೂ ಪಡೆದ ಅಂಕಗಳೂ ಸಹ ವೆಬ್‌ಸೈಟ್‌ನಲ್ಲಿ ಸಿಗಲಿವೆ. ಈ ಹಿಂದೆ ಅಂಕದ ವಿವರಗಳನ್ನು ಅಭ್ಯರ್ಥಿಗಳಿಗೆ ಅಂಚೆ ಮೂಲಕ ತಿಳಿಸಲಾಗುತ್ತಿತ್ತು.
2012ನೇ ಸಾಲಿನ ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶ ಕಳೆದ ತಿಂಗಳು ಪ್ರಕಟಗೊಂಡಿತ್ತು. ನಾಗರಿಕ ಸೇವೆಗೆ ಆಯ್ಕೆಯಾದ 1004 ಜನರ ಪೈಕಿ ಮೊದಲ ಸ್ಥಾನ ಪಡೆದ ಹರೀತಾ ವಿ.ಕುಮಾರ್ ಶೇ 53 ಅಂಕ ಗಳಿಸಿದ್ದಾರೆ. ಹರಿತಾ ಒಟ್ಟು 2250 ಅಂಕಗಳಲ್ಲಿ 1193 ಅಂಕ ಗಳಿಸಿದ್ದಾರೆ. ಎರಡನೇ ಸ್ಥಾನ ಪಡೆದ ವಿ. ಶ್ರೀರಾಂ, 2250 ಅಂಕಗಳಲ್ಲಿ 1149 ಅಂಕ (ಶೇ 51) ಹಾಗೂ ಮೂರನೇ ಸ್ಥಾನ ಪಡೆದ ಸ್ತುತಿ ಚರಣ್ 1148 ಅಂಕಗಳೊಂದಿಗೆ ಶೇ 51ರಷ್ಟು ಅಂಕ ಪಡೆದಿದ್ದಾರೆ.
`ನಾಗರಿಕ ಸೇವಾ ಪರೀಕ್ಷೆಗಳನ್ನು ಇನ್ನಷ್ಟು ಪಾರದರ್ಶಕವಾಗಿ ನಡೆಸುವ ಸಲುವಾಗಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ವೆಬ್‌ಸೈಟ್‌ಗೆ ಹಾಕುವ ಕ್ರಮಕ್ಕೆ ಯುಪಿಎಸ್‌ಸಿ ಮುಂದಾಗಿದೆ' ಎಂದು ಸಿಬ್ಬಂದಿ ತರಬೇತಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.