ADVERTISEMENT

ಯುವಜನಾಂಗದ ಪುನರ್‌ವ್ಯಾಖ್ಯೆ

​ಪ್ರಜಾವಾಣಿ ವಾರ್ತೆ
Published 31 ಮೇ 2012, 19:30 IST
Last Updated 31 ಮೇ 2012, 19:30 IST

ನವದೆಹಲಿ: ಯುವ ಸಮುದಾಯವನ್ನು ನಿರ್ಧರಿಸುವ ವಯಸ್ಸನ್ನು ಪುನರ್‌ವ್ಯಾಖ್ಯಾನಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಯುವ ನೀತಿ- 2012ರ ಹೊಸ ಕರಡನ್ನು ಯುವಜನ ವ್ಯವಹಾರ ಹಾಗೂ ಕ್ರೀಡಾ ಖಾತೆ ರಾಜ್ಯ ಸಚಿವ ಅಜಯ್ ಮಾಕನ್ ಗುರುವಾರ ಬಿಡುಗಡೆ ಮಾಡಿದ್ದಾರೆ.

ಈ ಕರಡಿನ ಅನ್ವಯ, 16ರಿಂದ 30ರವರೆಗಿನ ವಯೋಮಾನದವರನ್ನು ಯುವಕರು ಎನ್ನಲಾಗುತ್ತದೆ. ಪ್ರಸ್ತುತ 13ರಿಂದ 35ರ ವಯೋಮಾನದವರು ಈ ಗುಂಪಿಗೆ ಸೇರಿದ್ದಾರೆ.

`ಪ್ರಸ್ತುತ ಜಾರಿಯಲ್ಲಿರುವ ಅಂತರ ರಾಷ್ಟ್ರೀಯ ವ್ಯಾಖ್ಯೆಗಳ ಆಧಾರದ ಮೇರೆಗೆ, ಈಗಿರುವ ಯುವ ಪದವನ್ನು ಪುನರ್ ವ್ಯಾಖ್ಯಾನಿಸಲು ಹೊಸ ಕರಡು ಜಾರಿಗೆ ತರಲಾಗಿದೆ. ವಿಶ್ವಸಂಸ್ಥೆಯ ಪ್ರಕಾರ 15-24ರ ವಯೋಮಾನದವರು ಯುವಕರಾಗಿದ್ದರೆ, ಕಾಮನ್‌ವೆಲ್ತ್ ಪ್ರಕಾರ ಯುವಕರು ಎಂದರೆ 15-29 ವರ್ಷದವರು~ ಎಂದು  ವಿವರಿಸಿದ್ದಾರೆ.

ಯುವ ಜನಾಂಗ ಎನ್ನುವುದು ಏಕರೂಪದ ಗುಂಪಲ್ಲ, ಬದಲಾಗಿ ಅದು ಪರಿಸರ, ಹುಟ್ಟಿದ ಸ್ಥಳ, ಕುಟುಂಬದ ಸಾಮಾಜಿಕ-ಆರ್ಥಿಕ ಸ್ಥಾನಮಾನ ಹಾಗೂ ಅವರದ್ದೇ ಜೀವನಶೈಲಿಯನ್ನು ಒಳಗೊಂಡ ಬಹುರೂಪಿ ಗುಂಪು ಎಂದು ಹೊಸ ಕರಡು ವಿವರಿಸುತ್ತದೆ.

ಇದೇ ವೇಳೆ, ವಿದ್ಯಾರ್ಥಿ ಯುವಜನ, ವಲಸೆ ಬಂದ ಯುವಜನ, ಗ್ರಾಮೀಣ ಯುವಜನ, ಆದಿವಾಸಿ ಯುವಜನ, ಸಂದಿಗ್ಧದಲ್ಲಿ ಸಿಲುಕಿರುವ ಯುವಜನ, ಹಿಂಸಾಚಾರದಲ್ಲಿ ತೊಡಗಿರುವ ಯುವಜನ, ಶಾಲೆಬಿಟ್ಟ ಯುವಜನ, ಸಾಮಾಜಿಕ/ ನೈತಿಕವಾದ ವಿಶೇಷ ಗುಣಗಳಿಗೆ ಅಂಟಿಕೊಂಡ ಯುವಜನ, ಸಂಸ್ಥೆಗಳ ಆರೈಕೆಯಲ್ಲಿರುವ ಯುವಜನ ಹೀಗೆ ಒಂಬತ್ತು ರೀತಿಯ ಯುವ ಗುಂಪುಗಳನ್ನು ಕರಡು ಗುರುತಿಸಿದೆ.

`ಯುವತಿಯರು, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಪಂಗಡಗಳಿಗೆ ಸೇರಿದ ಯುವಕರು, ಅಂಗವಿಕಲ ಯುವಕರು ಆದ್ಯತಾ ಗುಂಪುಗಳಿಗೆ ಸೇರಿದ್ದಾರೆ. ಇವುಗಳ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಕ್ರಿಯಾ ಯೋಜನೆಯನ್ನು ಜಾರಿಗೆ ತರಲಾಗುವುದು~ ಎಂದು ಮಾಕನ್ ತಿಳಿಸಿದ್ದಾರೆ.

ಮೂರು ಗುಂಪುಗಳನ್ನು ರಚಿಸಲು ಉದ್ದೇಶಿಸಲಾಗಿದ್ದು, ಶಿಕ್ಷಣದ ಅಗತ್ಯ ಇರುವ 16-20ರ ವಯೋಮಾನದವರು ಮೊದಲ ಉಪ ಗುಂಪಿಗೆ ಸೇರುತ್ತಾರೆ. ಉದ್ಯೋಗ ಅಗತ್ಯವಾಗಿರುವ 20-25ರ ವಯೋಮಾನದವರು ಎರಡನೇ ಉಪ ಗುಂಪಿಗೆ, ಸ್ವ ಉದ್ದಿಮೆ ಸಹಾಯ ಅಗತ್ಯವಾಗಿರುವ 25-30ರ ವಯೋಮಾನದವರು ಮೂರನೇ ಉಪ ಗುಂಪಿಗೆ ಸೇರುತ್ತಾರೆ.

`ಆದರೆ ಈ ಹೊಸ ವ್ಯಾಖ್ಯಾನವು ರಾಜಕೀಯ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕರಡು ನೀತಿಯು ಎರಡು ತಿಂಗಳ ಚರ್ಚೆ ಬಳಿಕ ಅಂತಿಮ ರೂಪ ಪಡೆಯಲಿದೆ~ ಎಂದು ಮಾಕನ್ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.