ADVERTISEMENT

ಯುವತಿ ಹೆಸರು ಬಹಿರಂಗಕ್ಕೆ ಸಲಹೆ

ವಿವಾದಕ್ಕೆ ಎಡೆ ಮಾಡಿದ ಸಚಿವ ಶಶಿ ತರೂರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2013, 19:59 IST
Last Updated 1 ಜನವರಿ 2013, 19:59 IST
ಶಶಿ ತರೂರ್
ಶಶಿ ತರೂರ್   

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಬರ್ಬರ ಅತ್ಯಾಚಾರಕ್ಕೆ ತುತ್ತಾಗಿ ಸಾವಿಗೀಡಾದ ಯುವತಿಯ ಹೆಸರನ್ನು ಬಹಿರಂಗ ಮಾಡಬೇಕು ಎನ್ನುವ ಮೂಲಕ ಕೇಂದ್ರ ಸಚಿವ ಶಶಿ ತರೂರ್ ಅವರು ಮತ್ತೊಮ್ಮೆ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ಕ್ರೂರ ಅತ್ಯಾಚಾರ ಹಾಗೂ ನಂತರದ ತೀವ್ರ ಹಲ್ಲೆಯಿಂದ ಮೃತಪಟ್ಟ ಯುವತಿಯ ಹೆಸರನ್ನು ಗೋಪ್ಯವಾಗಿಡುವುದರಿಂದ ಏನನ್ನು ಸಾಧಿಸಿದಂತಾಗುತ್ತದೆ ಎಂದು ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವರಾದ ತರೂರ್ ಕೇಳಿದ್ದಾರೆ.

ಮೃತ ಯುವತಿಯ ಪೋಷಕರ ಆಕ್ಷೇಪವೇನೂ ಇಲ್ಲದಿದ್ದರೆ, ಪರಿಷ್ಕೃತಗೊಳ್ಳಲಿರುವ ಅತ್ಯಾಚಾರ ತಡೆ ಶಾಸನಕ್ಕೆ ಆಕೆಯ ಹೆಸರನ್ನೇ ಇಡಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.
`ಅತ್ಯಾಚಾರ ಪ್ರಕರಣದಲ್ಲಿ ಸಾವಿಗೀಡಾದ ಯುವತಿಯ ಹೆಸರನ್ನು ರಹಸ್ಯವಾಗಿ ಇಡುವುದರಿಂದ ಯಾವ ಹಿತಾಸಕ್ತಿಯನ್ನು ರಕ್ಷಿಸಿದಂತೆ ಆಗುತ್ತದೆ?

ಆಕೆಯ ಹೆಸರಿನಿಂದಲೇ ಆಕೆಯನ್ನು ಗೌರವಿಸುವುದರಲ್ಲಿ ತಪ್ಪೇನು?- ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಾರೆ.ದೆಹಲಿಯಲ್ಲಿ ಅತ್ಯಾಚಾರಕ್ಕೆ ತುತ್ತಾದ ಯುವತಿಯ ಬಗ್ಗೆ ಸುಳಿವು ನೀಡುವ ವರದಿ ಪ್ರಕಟಿಸಿದ ಇಂಗ್ಲಿಷ್ ದಿನಪತ್ರಿಕೆಯೊಂದರ ವಿರುದ್ಧ ದೆಹಲಿ ಪೊಲೀಸರು ದೂರು ದಾಖಲಿಸಿರುವ ಬೆನ್ನಲ್ಲೇ ತರೂರ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಭಾರತೀಯ ದಂಡ ಸಂಹಿತೆಯ 228ನೇ ಕಲಂ ಅನ್ವಯ, ಅತ್ಯಾಚಾರಕ್ಕೆ ತುತ್ತಾದ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲು ಅಥವಾ ಮುದ್ರಿಸಲು ಅಥವಾ ಬಲಿಪಶುವಾದವರು ಇಂಥವರೇ ಎಂಬ ಸುಳಿವು ನೀಡುವ ಯಾವುದೇ ಮಾಹಿತಿ ಪ್ರಕಟಿಸಲು ಅವಕಾಶವಿಲ್ಲ.

ತರೂರ್ ಅವರ ಹೇಳಿಕೆಯ ಪರ ಹಾಗೂ ವಿರೋಧವಾಗಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಪ್ರಾಯಗಳು ದಾಖಲಾಗುತ್ತಿವೆ.`ಅತ್ಯಾಚಾರಕ್ಕೆ ತುತ್ತಾದವರ ಪ್ರತಿಮೆ ನಿರ್ಮಾಣ, ದೇವಾಲಯ ನಿರ್ಮಾಣ ಇತ್ಯಾದಿಗಳನ್ನು ನಿರ್ಮಿಸುವ ಗೀಳು ನಿಮಗೇಕೆ. ಅದಕ್ಕೆ ಬದಲಾಗಿ ಅಪರಾಧ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಿ' ಎಂಬುದು ಒಬ್ಬರ ಸಲಹೆಯಾಗಿದೆ.

`ತರೂರ್ ಅವರು ಒಳ್ಳೆಯ ಸಲಹೆ ನೀಡಿದ್ದಾರೆ. ನಾಲ್ಕು ದಿನಗಳ ಹಿಂದೆ ನಾನು ಕೂಡ ಇದೇ ಸಲಹೆ ನೀಡಿದ್ದೆ' ಎಂದು ಮತ್ತೊಬ್ಬರು ಬೆಂಬಲಿಸಿದ್ದಾರೆ.

ಶಾಲೆಗೆ ಯುವತಿ ಹೆಸರು
ಬಲಿಯಾ (ಪಿಟಿಐ):
ದೆಹಲಿಯಲ್ಲಿ ಅತ್ಯಾಚಾರಕ್ಕೆ ತುತ್ತಾಗಿ ಸಾವಿಗೀಡಾದ ಯುವತಿಯ ನೆನಪಿನಲ್ಲಿ ಸ್ವಗ್ರಾಮದ ಪ್ರಾಥಮಿಕ ಶಾಲೆಗೆ ಆಕೆಯ ಹೆಸರನ್ನೇ ಇಡಲಾಗುವುದು.ಗ್ರಾಮಸ್ಥರ ಹಾಗೂ ಯುವತಿಯ ಕುಟುಂಬದವರ ಆಶಯದಂತೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಯುವತಿಯ ಗ್ರಾಮವಾದ ಮೇದ್ವಾರ್ ಕಾಲನ್‌ನ ಮುಖ್ಯಸ್ಥ ಶಿವ್ ಮಂದಿರ್ ಸಿಂಗ್ ತಿಳಿಸಿದ್ದಾರೆ.

ಈ ಕುರಿತು ಅಧಿಕೃತ ನಿರ್ಣಯ ಕೈಗೊಳ್ಳಲು ಶೀಘ್ರವೇ ಗ್ರಾಮ ಪಂಚಾಯಿತಿ ಸಭೆ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ.ಇದಲ್ಲದೇ ಮನೆ ಮಗಳ ನೆನಪಿನಲ್ಲಿ ಗ್ರಾಮದಲ್ಲಿ ಮತ್ತೊಂದು ಸ್ಮಾರಕ ನಿರ್ಮಿಸಬೇಕು ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬೇಕು ಎಂಬ ಬೇಡಿಕೆಗಳನ್ನು ಕೂಡ  ಕುಟುಂಬದವರು ಮುಂದಿಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.