ADVERTISEMENT

ಯೋಜನಾ ಆಯೋಗದ ವರದಿ: ಬಡತನ ಇಳಿಮುಖ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ದೇಶದಲ್ಲಿ ಪ್ರತಿ ಮೂವರು ವ್ಯಕ್ತಿಗಳಲ್ಲಿ ಒಬ್ಬರು ಬಡವರಿದ್ದು, ಬಡತನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ಯೋಜನಾ ಆಯೋಗ ತಿಳಿಸಿದೆ.

2004-05ರಲ್ಲಿ ದೇಶದಲ್ಲಿ ಬಡತನದ ಪ್ರಮಾಣ ಶೇ 37.2ರಷ್ಟಿದ್ದು, 2009-10ರಲ್ಲಿ ಇದು ಶೇ 29.8ಕ್ಕೆ ಇಳಿದಿದೆ ಎಂದು ಅಂದಾಜು ಮಾಡಲಾಗಿದೆ. ಪ್ರತಿ ವ್ಯಕ್ತಿ ತಿಂಗಳಿಗೆ 859.6 ರೂಪಾಯಿ (ನಗರ ಪ್ರದೇಶ) ಹಾಗೂ 672.8 (ಗ್ರಾಮೀಣ ಪ್ರದೇಶ)ದ ವ್ಯಯ ಮಾಡುವ ವ್ಯಕ್ತಿಗಳನ್ನು ಬಡವರು ಎಂದು ಅಂದಾಜು ಮಾಡಿಲ್ಲ. ಬದಲಾಗಿ ವಿವಾದಾತ್ಮಕ ತೆಂಡೂಲ್ಕರ್ ಸಮಿತಿಯ ಮಾನದಂಡವನ್ನು ಬಡತನ ರೇಖೆಯನ್ನು ಅಳೆಯಲು ಬಳಸಿಕೊಳ್ಳಲಾಗಿದೆ ಎಂದು ಯೋಜನಾ ಆಯೋಗ ತಿಳಿಸಿದೆ.

2011ರ ಜೂನ್ ಬೆಲೆಗಳನ್ನು ಮಾನದಂಡವನ್ನಾಗಿಟ್ಟುಕೊಂಡು ನಗರ ಪ್ರದೇಶದಲ್ಲಿ ದಿನಕ್ಕೆ 32 ರೂಪಾಯಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 26 ರೂಪಾಯಿ ಅನುಭೋಗ ಮಾಡುವವರನ್ನು ಬಡತನ ರೇಖೆಯಿಂದ ಕೈಬಿಡಲಾಗಿದೆ ಎಂದು ಯೋಜನಾ ಆಯೋಗ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದೆ.
 
ಆದರೆ ಯೋಜನಾ ಆಯೋಗ ಬಡತನವನ್ನು ಗುರುತಿಸಲು ಅನುಸರಿಸುತ್ತಿರುವ ಮಾನದಂಡವನ್ನು ನಾಗರಿಕ ಸಮಾಜ ಪ್ರಶ್ನಿಸಿದ್ದು, ಇಷ್ಟು ಕಡಿಮೆ ಮೊತ್ತದ ಹಣದಲ್ಲಿ ಜೀವನ ಸಾಗಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದೆ.

ಆಯೋಗ ಸೋಮವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 2009-10ರಲ್ಲಿ 34.47 ಕೋಟಿ ಜನರು ಬಡವರಿದ್ದರೆ, ಈ ಸಂಖ್ಯೆ 2004-05ರಲ್ಲಿ 40.72 ಕೋಟಿ ಇತ್ತು. ತೆಂಡೂಲ್ಕರ್ ಸಮಿತಿಯ ಶಿಫಾರಸಿನಂತೆ ವ್ಯಕ್ತಿ ಸೇವಿಸುವ ಆಹಾರದ ಜತೆಗೆ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಮಾಡುವ ವೆಚ್ಚವನ್ನೂ ಪರಿಗಣಿಸಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.