ADVERTISEMENT

ರಕ್ಷಣಾ ಅವ್ಯವಹಾರದಲ್ಲಿ ಮಧ್ಯವರ್ತಿಗೆ ಕಮಿಷನ್: ಅಣ್ಣಾ ತಂಡದ ಆರೋಪ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ನವದೆಹಲಿ: `ದೇಶದ ಹಲವು ರಕ್ಷಣಾ ವ್ಯವಹಾರಗಳಲ್ಲಿ ಮಧ್ಯವರ್ತಿಗಳು ಸಕ್ರಿಯ ಪಾತ್ರ ವಹಿಸಿದ್ದು, ಕಮಿಷನ್ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳಿವೆ~ ಎಂದು ಅಣ್ಣಾ ತಂಡದ ಸದಸ್ಯರಾದ ಅರವಿಂದ್ ಕೇಜ್ರಿವಾಲ್ ಹಾಗೂ ಪ್ರಶಾಂತ್ ಭೂಷಣ್ ಗುರುವಾರ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.

`ಕೆಲವು ರಕ್ಷಣಾ ವ್ಯವಹಾರಗಳಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಅಭಿಷೇಕ್ ವರ್ಮಾ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪುರಾವೆಗಳು ನಮ್ಮ ಬಳಿ ಇವೆ. ನೌಕಾಪಡೆಗೆ ಸಂಬಂಧಿಸಿದ ಕೆಲವು ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿದ ಆರೋಪದಲ್ಲಿ ವರ್ಮಾ ಭಾಗಿಯಾಗಿ ಜಾಮೀನು ಪಡೆದಿದ್ದಾರೆ~ ಎಂದು ಕೇಜ್ರಿವಾಲ್ ಮತ್ತು ಭೂಷಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ತಮ್ಮ ಆರೋಪಗಳಿಗೆ ಪೂರಕವಾಗಿ ಅಮೆರಿಕ ಮೂಲದ ಅಟಾರ್ನಿ ಎಡ್ಮಂಡ್ ಇ. ಆಲೆನ್ ಅವರಿಂದ ಪಡೆದಿರುವ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು. ಈ ಮೊದಲು ವರ್ಮಾ ಅವರ ಪಾಲುದಾರರಾಗಿದ್ದ ಆಲೆನ್ ಈಗ ಅಲ್ಲಿನ ನ್ಯಾಯಾಲಯದಲ್ಲಿ ವರ್ಮಾ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದಾರೆ.

ADVERTISEMENT

ವರ್ಮಾ ಅವರ ವ್ಯವಹಾರಗಳ ಕುರಿತು ಸಿಬಿಐ ಮತ್ತು ಸರ್ಕಾರದ ಕೆಲವು ಸಂಸ್ಥೆಗಳಿಗೂ ದೂರು ಸಲ್ಲಿಸಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಶಾಂತ್ ಭೂಷಣ್ ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರವು ಇಸ್ರೇಲ್ ಮೂಲದ ಇಸಿಐ ಟೆಲಿಕಾಂ ಮೇಲೆ ಹೇರಿದ್ದ `ಸುರಿ ವಿರೋಧಿ ತೆರಿಗೆ~ ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ವರ್ಮಾ ಪ್ರಮುಖ ಪಾತ್ರ ವಹಿಸಿದ್ದರು. 2010ರಲ್ಲಿ ಕೇಂದ್ರ ಸರ್ಕಾರ `ಇಸಿಐ ಟೆಲಿಕಾಂ~ ವಿರುದ್ಧ ಹೇರಿದ್ದ ಸಾವಿರ ಕೋಟಿ ರೂಪಾಯಿಗಳ `ಸುರಿ ವಿರೋಧಿ ತೆರಿಗೆ~ ರದ್ದು ಮಾಡಿತ್ತು. ಈ ಹೊರೆಯಿಂದ ಮುಕ್ತಿ ದೊರಕಿಸುವಂತೆ ಇಸಿಐ, ವರ್ಮಾ ಅವರಿಗೆ ಸೇರಿದ ಕಂಪನಿಯನ್ನು ಸಂಪರ್ಕಿಸಿದ್ದರು ಎಂದು ಅವರು ದೂರಿದರು.

ವಿದೇಶಾಂಗ ಸಚಿವ ಕೃಷ್ಣ, ಇಸ್ರೇಲ್‌ಗೆ ಭೇಟಿ ನೀಡುವ ಮೊದಲು ವರ್ಮಾ ಇಸಿಐ ಪ್ರತಿನಿಧಿಗಳಿಗೆ ಇ- ಮೇಲ್ ಸಂದೇಶ ಕಳುಹಿಸಿದ್ದರು. ಈ ಸಂದೇಶದಲ್ಲಿ ವಿದೇಶಾಂಗ ಸಚಿವರು `ಸುರಿ ವಿರೋಧಿ ತೆರಿಗೆ~ ರದ್ದಿಗೆ ಶಿಫಾರಸು ಮಾಡಲಿದ್ದಾರೆ ಎಂದು ತಿಳಿಸಿದ್ದರು.

ಕೃಷ್ಣ ಅವರ ಇಸ್ರೇಲ್ ಭೇಟಿ ಬಳಿಕ ಸರ್ಕಾರ ತೆರಿಗೆ ರದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ  ಇ- ಮೇಲ್ ಸಾಚಾತನ ಕುರಿತು ಪರಿಶೀಲಿಸಬೇಕು. ಇದು ನಿಜವಾಗಿದ್ದರೆ ಇದೊಂದು ಗಂಭೀರ ಸ್ವರೂಪದ ಹಗರಣವಾಗಲಿದೆ ಎಂದು ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಅಭಿಪ್ರಾಯಪಟ್ಟರು.

ಹೆಲಿಕಾಪ್ಟರ್ ವ್ಯವಹಾರ: ಇಟಲಿ ಮೂಲದ `ಆಗಸ್ಟ್ ವೆಸ್ಟ್‌ಲ್ಯಾಂಡ್~ ಕಂಪನಿ 12 ಹೆಲಿಕಾಪ್ಟರ್‌ಗಳನ್ನು ಸೇನೆಗೆ ಪೂರೈಕೆ ಮಾಡಿದೆ. ಇದರ ಒಟ್ಟು ಮೊತ್ತ ರೂ 3546 ಕೋಟಿ. ಈ ವ್ಯವಹಾರದಲ್ಲೂ ವರ್ಮಾ ಕಂಪನಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದೆ. ಈ ಕೆಲಸಕ್ಕೆ ಶೇ 15ರಷ್ಟು ಸಲಹಾ ಶುಲ್ಕ  ಪಡೆಯಲಾಗಿದೆ.

ಈ ಒಪ್ಪಂದದಲ್ಲಿ ಕಮಿಷನ್ ವ್ಯವಹಾರ ನಡೆದಿದೆ ಎನ್ನುವ ಇಟಲಿ ಪತ್ರಿಕೆಗಳ ವರದಿ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ವಿಚಾರಣೆ ನಡೆಸುತ್ತಿದೆ. ಸಲಹಾ ಶುಲ್ಕ ನೀಡಿಕೆ ರಕ್ಷಣಾ ಇಲಾಖೆ ಮಾರ್ಗಸೂಚಿಗೆ ವಿರುದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಖರೀದಿ ವ್ಯವಹಾರ ಕುರಿತು ತನಿಖೆ ನಡೆಸಬೇಕು. ಇದರಲ್ಲಿ ಬೇರೆಯವರಿಗೂ ಪಾಲು ಇದೆಯೇ ಎಂಬ ಬಗ್ಗೆ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರವು ತಪ್ಪು ಎಸಗಿದ ಆರು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಈ ಪೈಕಿ ಜರ್ಮನಿ ಮೂಲದ `ರ‌್ಯಾಡ್~ (ರೀನ್‌ಮೆಟಲ್) ಕಂಪನಿಯೂ ಒಂದು. ಇದನ್ನು ಕಪ್ಪು ಪಟ್ಟಿಯಿಂದ ತೆಗೆಸುವಲ್ಲಿ `ಗ್ಯಾಂಟನ್~ ಪ್ರಮುಖ ಪಾತ್ರ ವಹಿಸಿದೆ ಎಂದು ದೂರಿದರು.

ವರ್ಮಾ ಜೈಲಿನಿಂದಲೇ ಮಧ್ಯವರ್ತಿ ಕೆಲಸ ಮಾಡಿದ್ದಾರೆ. `ಇ- ಮೇಲ್~ ಕಳಿಸಿದ್ದಾರೆ. ಬೇರೆ ಬೇರೆ ಖಾತೆಗಳಿಗೆ ಹಣಕಾಸು ವರ್ಗಾವಣೆ ಕೂಡಾ ಮಾಡಿದ್ದಾರೆ. ಈ ಎಲ್ಲ ವ್ಯವಹಾರಗಳ ಸತ್ಯಾಸತ್ಯತೆ ಬಹಿರಂಗಕ್ಕೆ ಬರಲು ಸೂಕ್ತ ತನಿಖೆ ನಡೆಸಬೇಕು ಎಂದು  ಅಣ್ಣಾ ತಂಡದ ಸದಸ್ಯರು ಆಗ್ರಹಿಸಿದರು.

ಈ  ಎಲ್ಲ ಆರೋಪ ಕುರಿತು ಸಿಬಿಐ ಮತ್ತು ಸಿವಿಸಿಗೆ ದೂರು ಕೊಡಲಾಗಿದೆ. ಆದರೂ ವರ್ಮಾ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.