ADVERTISEMENT

ರಾಜಕೀಯ ಕಣವಾದ ರೈತರ ಪ್ರತಿಭಟನೆ

ವಿರೋಧ ಪಕ್ಷ ಮುಖಂಡರ ಬಂಧನ, ಬಿಡುಗಡೆ

ಪಿಟಿಐ
Published 8 ಜೂನ್ 2017, 19:30 IST
Last Updated 8 ಜೂನ್ 2017, 19:30 IST
ಗಲಭೆಯಲ್ಲಿ ಮೃತಪಟ್ಟ ರೈತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ನೀಮಚ್‌ಗೆ ಬಂದಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪೊಲೀಸರು ಬಂಧಿಸಲು ಮುಂದಾಗಿದ್ದರು. ಈ ಸಂದರ್ಭ ತಡೆಗೋಡೆ ಹಾರಲು ಯತ್ನಿಸಿದ ರಾಹುಲ್‌ –ಪಿಟಿಐ ಚಿತ್ರ
ಗಲಭೆಯಲ್ಲಿ ಮೃತಪಟ್ಟ ರೈತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ನೀಮಚ್‌ಗೆ ಬಂದಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪೊಲೀಸರು ಬಂಧಿಸಲು ಮುಂದಾಗಿದ್ದರು. ಈ ಸಂದರ್ಭ ತಡೆಗೋಡೆ ಹಾರಲು ಯತ್ನಿಸಿದ ರಾಹುಲ್‌ –ಪಿಟಿಐ ಚಿತ್ರ   

ನಯಾ ಗಾಂವ್‌, ಮಧ್ಯಪ್ರದೇಶ: ಮಧ್ಯಪ್ರದೇಶದ ರೈತರ ಚಳವಳಿ ವಿರೋಧ ಪಕ್ಷಗಳ ಕೈಗೆ ಹೊಸ ಅಸ್ತ್ರವೊಂದನ್ನು ನೀಡಿದೆ.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಪಕ್ಷದ ಹಿರಿಯ ಮುಖಂಡರು ಚಳವಳಿಯ ಕೇಂದ್ರ ಸ್ಥಳವಾದ ಮಂದ್‌ಸೌರ್‌ಗೆ ಹೋಗಲು ಗುರುವಾರ ಯತ್ನಿಸಿದರು. ಆದರೆ ಅವರನ್ನು ತಡೆದು ವಶಕ್ಕೆ ಪಡೆದ ಪೊಲೀಸರು ನಂತರ  ಬಿಡುಗಡೆ ಮಾಡಿದರು.

ಭದ್ರತಾ ವ್ಯವಸ್ಥೆಗಳನ್ನು ಉಲ್ಲಂಘಿಸಿ ಮಂದ್‌ಸೌರ್‌ನತ್ತ ಸಾಗಿದ ರಾಹುಲ್‌ ಅವರನ್ನು ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಿಂದ 400 ಕಿ.ಮೀ ದೂರದ ನಯಾ ಗಾಂವ್‌ನಲ್ಲಿ ವಶಕ್ಕೆ ಪಡೆಯಲಾಯಿತು. ಇದು ಮಂದ್‌ಸೌರ್‌ನಿಂದ ಸುಮಾರು 70 ಕಿ.ಮೀ ದೂರದಲ್ಲಿದೆ.

ADVERTISEMENT

ದೊಡ್ಡ ಸಂಖ್ಯೆಯ ಕಾಂಗ್ರೆಸ್‌ ಬೆಂಬಲಿಗರು ‘ಜೈ ಜವಾನ್‌, ಜೈ ಕಿಸಾನ್‌’ ಮತ್ತು ‘ರಾಹುಲ್‌ ಗಾಂಧಿ ಜಿಂದಾಬಾದ್‌’ ಎಂಬ ಘೋಷಣೆಗಳನ್ನು ಕೂಗುತ್ತಾ ಅವರನ್ನು ಹಿಂಬಾಲಿಸುತ್ತಿದ್ದರು. ರಾಜಸ್ತಾನ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಚಿನ್‌ ಪೈಲಟ್‌, ಸಂಸದ ಜೈವರ್ಧನ್‌ ಸಿಂಗ್‌ ಅವರನ್ನೂ ಪೊಲೀಸರು ಬಂಧಿಸಿದರು.

ಪಕ್ಷದ ಹಿರಿಯ ಮುಖಂಡರಾದ ದಿಗ್ವಿಜಯ್‌ ಸಿಂಗ್‌, ಕಮಲನಾಥ್‌ ಮತ್ತು  ಜೆಡಿಯು ಮುಖಂಡ ಶರದ್‌ ಯಾದವ್‌ ಅವರೂ ರಾಹುಲ್‌ ಜತೆಗಿದ್ದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಈ ಅವಕಾಶವನ್ನು ಮುಖಂಡರು ಉಪಯೋಗಿಸಿಕೊಂಡರು.

ಮಂದ್‌ಸೌರ್‌ನಲ್ಲಿ ಮಂಗಳವಾರ ಐವರು ರೈತರ ಸಾವಿಗೆ ಮೋದಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಅವರೇ ನೇರ ಹೊಣೆ ಎಂದು ರಾಹುಲ್‌ ಹೇಳಿದರು.

ಮಂದ್‌ಸೌರ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಹಾಗಾಗಿ ಅಲ್ಲಿಗೆ ಹೋಗಲು ಅವಕಾಶ ಇಲ್ಲ ಎಂದು ಪೊಲೀಸರು ಹೇಳಿದರು. ಆದರೆ  ದಿಗ್ವಿಜಯ್‌ ಸಿಂಗ್‌ ಮತ್ತು ಕಮಲನಾಥ್‌ ಅವರು ಇದಕ್ಕೆ ಪ್ರತಿರೋಧ ತೋರಿದರು. ತಾವು ಅಲ್ಲಿಗೆ ಶಾಂತಿ ಸ್ಥಾಪನೆಗಾಗಿ ಹೋಗುತ್ತಿದ್ದೇವೆ. ಹಾಗಿದ್ದರೂ ತಡೆಯುತ್ತಿರುವುದು ಸರಿಯಲ್ಲ ಎಂದು ವಾದಿಸಿದರು.

ರಾಹುಲ್‌ ಜತೆಗೆ ಸುಮಾರು 2,000 ಜನರಿದ್ದರು. 150ಕ್ಕೂ ಹೆಚ್ಚು ವಾಹನಗಳಿದ್ದವು.

‌ರಾಹುಲ್‌ ಅವರು ದೆಹಲಿಯಿಂದ ರಾಜಸ್ತಾನದ ಉದಯಪುರಕ್ಕೆ ವಿಶೇಷ ವಿಮಾನದಲ್ಲಿ ಬಂದರು. ಅಲ್ಲಿಂದ ಅವರು ಕಾರಿನಲ್ಲಿ ಪ್ರಯಾಣಿಸಿದರು.

ರಾಜಸ್ತಾನದ ಗಡಿ ತಲುಪುವುದಕ್ಕೆ ಮೊದಲು ಸುಮಾರು ಏಳು ಕಿಲೋಮೀಟರ್‌ ದೂರವನ್ನು ಅವರು ದ್ವಿಚಕ್ರವಾಹನದ ಹಿಂಬದಿ ಸವಾರನಾಗಿ ಕ್ರಮಿಸಿದರು. ನಡುವೆ ದ್ವಿಚಕ್ರ ವಾಹನ ಬದಲಾಯಿಸಿದರು. ರಾಜ್ಯದ ಗಡಿ ಪ್ರವೇಶಿಸುವ ಸಂದರ್ಭದಲ್ಲಿ ಸುಮಾರು ನೂರು ಮೀಟರ್‌ ಕಾಲ್ನಡಿಗೆಯಲ್ಲಿ ಹೋದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಕಣ್ತಪ್ಪಿಸಿ ಮಂದ್‌ಸೌರ್‌ ತಲುಪುವುದಕ್ಕಾಗಿ ರಾಹುಲ್‌ ವಿವಿಧ ವಾಹನಗಳನ್ನು ಬಳಸಿದ್ದರು.

ನಿಯಮ ಉಲ್ಲಂಘನೆ ಪರಿಶೀಲನೆ: ದ್ವಿಚಕ್ರ ವಾಹನ ಸವಾರಿ ಸಂದರ್ಭದಲ್ಲಿ ರಾಹುಲ್‌ ಅವರು ಸಂಚಾರ ನಿಯಮ ಉಲ್ಲಂಘಿಸಿದ್ದಾರೆಯೇ 
ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನದಲ್ಲಿ ಒಂದು ಸಂದರ್ಭದಲ್ಲಿ ಮೂರು ಜನರಿದ್ದರು ಎಂಬುದು ಒಂದು ಆರೋಪ. ಜತೆಗೆ ಅವರು ಹೆಲ್ಮೆಟ್‌
ಧರಿಸಿರಲಿಲ್ಲ ಎಂದೂ ಹೇಳಲಾಗುತ್ತಿದೆ.

(ಭೋಪಾಲ್‌ ವರದಿ):  ಮಂದ್‌ಸೌರ್‌ನಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಐವರು ರೈತರ ಸಾವಿಗೆ ಪೊಲೀಸರು ಗುಂಡು ಹಾರಿಸಿದ್ದೇ ಕಾರಣ ಎಂದು ಅಲ್ಲಿನ ಗೃಹ ಸಚಿವ ಭೂಪೇಂದ್ರ ಸಿಂಗ್‌ ಒಪ್ಪಿಕೊಂಡಿದ್ದಾರೆ.

ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿಲ್ಲ. ಹಾಗಾಗಿ ರೈತರ ಸಾವಿಗೆ ಪೊಲೀಸರು ಕಾರಣ ಅಲ್ಲ ಎಂದು ಇದುವರೆಗೆ ಅಧಿಕಾರಿಗಳು ವಾದಿಸುತ್ತಿದ್ದರು.

‘ನಾವು ಗುಂಡು ಹಾರಿಸಿಲ್ಲ ಮತ್ತು ನಮಗೆ ಗುಂಡು ಹಾರಿಸಲು ಆದೇಶವೂ ಇರಲಿಲ್ಲ’ ಎಂದು ಪೊಲೀಸರು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಆಗಿನ ಜಿಲ್ಲಾಧಿಕಾರಿ ಎಸ್‌.ಕೆ. ಸಿಂಗ್‌ ಮಾಧ್ಯಮಕ್ಕೆ ತಿಳಿಸಿದ್ದರು.

ಓಡಿದ ರಾಹುಲ್‌

ರಾಹುಲ್‌ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ ದೊಡ್ಡ ನಾಟಕವೇ ನಡೆಯಿತು. ಮೆರವಣಿಗೆಯ ಮುಂದಿನಿಂದ ಸಾಗುತ್ತಿದ್ದ ರಾಹುಲ್‌ ಅವರನ್ನು ಪೊಲೀಸರು ಹಿಂದಕ್ಕೆ ತಳ್ಳಿದರು. ಆಗ ರಾಹುಲ್‌ ಹತ್ತಿರದ ಹೊಲಕ್ಕೆ ಓಡಿದರು. ಪೊಲೀಸರು ಅಲ್ಲಿಂದ ಅವರನ್ನು ಹಿಡಿದುಕೊಂಡು ಬಂದರು.

* ಕೃಷಿ ಉತ್ಪನ್ನಕ್ಕೆ ಮೋದಿ ಅವರು ಸರಿಯಾದ ಬೆಲೆ ನೀಡುತ್ತಿಲ್ಲ, ರೈತರಿಗೆ ಬೋನಸ್‌ ಆಗಲಿ ಪರಿಹಾರವಾಗಲಿ ದೊರೆಯುತ್ತಿಲ್ಲ. ರೈತರಿಗೆ ಗುಂಡೇಟು ಮಾತ್ರ ನೀಡುತ್ತಿದ್ದಾರೆ.

–ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

* ರೈತರ ಪ್ರತಿಭಟನೆಯನ್ನು ಕಾಂಗ್ರೆಸ್‌ ರಾಜಕೀಯಕ್ಕೆ ಬಳಸುತ್ತಿದೆ. ಹಿಂಸೆಗೆ ಪ್ರಚೋದನೆ ನೀಡುತ್ತಿದೆ. ಪ್ರಚಾರಕ್ಕಾಗಿ ಈ ಅವಕಾಶವನ್ನು ರಾಹುಲ್‌ ಬಳಸಿಕೊಳ್ಳುತ್ತಿದ್ದಾರೆ

–ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

* ಸುರಕ್ಷತಾ ಕ್ರಮಗಳನ್ನು ರಾಹುಲ್‌ ಉಲ್ಲಂಘಿಸಿದ್ದು ತಪ್ಪು. ರಾಷ್ಟ್ರೀಯ ನಾಯಕರೊಬ್ಬರು ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ್ದು ಸರಿಯಲ್ಲ.

–ಭೂಪೇಂದ್ರ ಸಿಂಗ್‌, ಮಧ್ಯಪ್ರದೇಶದ ಗೃಹ ಸಚಿವ

ಇಳಿದ ಪ್ರತಿಭಟನೆ ಕಾವು

* ಮಂದ್‌ಸೌರ್‌ನಲ್ಲಿ ಕ್ಷಿಪ್ರ ಕಾರ್ಯ ಪಡೆ ನಿಯೋಜನೆ, ಪರಿಸ್ಥಿತಿ ನಿಯಂತ್ರಣದಲ್ಲಿ

* ಕಳೆದ ಒಂದು ವಾರದಿಂದ ಪ್ರತಿಭಟನೆ

* ಸಾಲ ಮನ್ನಾ ಮತ್ತು ಬೆಳೆಗೆ ಉತ್ತಮ ಬೆಲೆ ರೈತರ ಬೇಡಿಕೆಗಳು

* ಮಂಗಳವಾರ ಹಿಂಸೆಗೆ ಇಳಿದ ರೈತರಿಂದ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಹಲ್ಲೆ

* ಪೊಲೀಸರು ಹಾರಿಸಿದ ಗುಂಡಿಗೆ ಐದು ರೈತರು ಬಲಿ

* ಮಧ್ಯಪ್ರದೇಶ ಸರ್ಕಾರಕ್ಕೆ ಸವಾಲಾದ ಪ್ರತಿಭಟನೆ: ಸರ್ಕಾರದ ವಿರುದ್ಧ ಅಸ್ತ್ರವಾಗಿ ವಿರೋಧ ಪಕ್ಷಗಳಿಂದ ಬಳಕೆ

* ರೈತರನ್ನು ಸಮಾಧಾನಪಡಿಸಲು ಸರ್ಕಾರದ ಯತ್ನ

* ಸುಸ್ತಿದಾರ ರೈತರಿಗೆ ಸಾಲ ಮರು ಹೊಂದಾಣಿಕೆ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.