ADVERTISEMENT

ರಾಜಕೀಯ ಬಿಕ್ಕಟ್ಟು: ಪರಿಹಾರ ಸೂತ್ರಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:35 IST
Last Updated 6 ಜನವರಿ 2012, 19:35 IST

ನವದೆಹಲಿ: ರಾಜ್ಯ ರಾಜಕೀಯ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲರಿಗೂ ಒಪ್ಪಿಗೆಯಾಗುವ ಪರಿಹಾರ ಸೂತ್ರವೊಂದನ್ನು ಹುಡುಕಲು ತಲೆ ಕೆಡಿಸಿಕೊಂಡಿದೆ.

ಯಡಿಯೂರಪ್ಪ, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಎಲ್ಲರಿಗೂ ಸಮಾಧಾನವಾಗುವ ಸರ್ವಸಮ್ಮತ ಸೂತ್ರ ರೂಪಿಸಲು ಬಿಜೆಪಿ ವರಿಷ್ಠರು ಪ್ರಯತ್ನ ಆರಂಭಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

 ಸದ್ಯಕ್ಕೆ ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕದಲಿಸುವ ಆಲೋಚನೆ ವರಿಷ್ಠರಿಗೆ ಇದ್ದಂತಿಲ್ಲ. ಹಾಗೆ ಯಡಿಯೂರಪ್ಪ ಅವರನ್ನು ಕಡೆಗಣಿಸುವ ಉದ್ದೇಶವೂ ಇಲ್ಲ. ಇಬ್ಬರಿಗೂ ಅತೃಪ್ತಿಆಗದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಈಶ್ವರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಏನಾದರೊಂದು ಪರಿಹಾರ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

 ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರ ತಲೆಯೊಳಗೆ ಪರಿಹಾರ ಸೂತ್ರ ಈಗಾಗಲೇ ಮೊಳಕೆಯೊಡೆದಂತಿದೆ. ಉಳಿದ ವರಿಷ್ಠರ ಜತೆ ಚರ್ಚಿಸಿ ಅಂತಿಮಗೊಳಿಸುವ ಸಾಧ್ಯತೆ ಇದೆ.ಬಳಿಕ ಯಡಿಯೂರಪ್ಪ, ಸದಾನಂದಗೌಡ, ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸುವ ವೇಳೆ ಇದನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

1.ಯಡಿಯೂರಪ್ಪ ಅವರಿಗೆ ರಾಜ್ಯ ಅಧ್ಯಕ್ಷ ಸ್ಥಾನ ನೀಡಿ, ಈಶ್ವರಪ್ಪ ಅವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸುವುದು. ಅವರು ಕೇಳುವ ಖಾತೆ ವಹಿಸುವುದು. 2.ಕೇಂದ್ರ ಬಿಜೆಪಿಯಂತೆ ರಾಜ್ಯದಲ್ಲೂ ಶಾಸಕಾಂಗ ಪಕ್ಷದ `ಅಧ್ಯಕ್ಷ~ರಾಗಿ ಯಡಿಯೂರಪ್ಪ ನೇಮಕ 3.ಕೇಂದ್ರ ಸಮಿತಿಯಲ್ಲಿ ಯಾವುದಾದರೂ ಪದಾಧಿಕಾರಿ ಸ್ಥಾನ ಕೊಡುವುದು. ಆದರೆ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಹುದ್ದೆ ಅಸಾಧ್ಯದ ಮಾತು ಎಂದು ಮೂಲಗಳು ಸ್ಪಷ್ಟಪಡಿಸಿವೆ.

 ರಾಜ್ಯ ರಾಜಕೀಯ ಬಿಕ್ಕಟ್ಟು ಕುರಿತು ವಿವರಿಸಲು ದೆಹಲಿಗೆ ಆಗಮಿಸಿದ್ದ ಸಾರಿಗೆ ಸಚಿವ ಆರ್. ಅಶೋಕ್ ಶುಕ್ರವಾರವೂ ಗಡ್ಕರಿ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯದ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್,  ಮತ್ತೊಬ್ಬ ಹಿರಿಯ ಮುಖಂಡ ಅನಂತಕುಮಾರ್ ಇದ್ದರು. ಯಡಿಯೂರಪ್ಪನವರಿಗೆ ಸರಿಯಾದ ಸ್ಥಾನಮಾನ ಕಲ್ಪಿಸದಿದ್ದರೆ ಪಕ್ಷ ಮತ್ತು ಸರ್ಕಾರದಲ್ಲಿ ಒಗ್ಗಟ್ಟು ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸಚಿವೆ ಶೋಭಾ ಮೂಲಕ ಈಚೆಗೆ ಯಡಿಯೂರಪ್ಪ ಅವರಿಗೆ ಸಂದೇಶ ಕಳುಹಿಸಿದ್ದ ಹೈಕಮಾಂಡ್ ಈಗ ಮತ್ತೆ ಅಶೋಕ್ ಮೂಲಕ ಸಂದೇಶ ರವಾನಿಸಿದೆ. ಹೈಕಮಾಂಡ್ ಸಂದೇಶ ಹೊತ್ತು ಸಾರಿಗೆ ಸಚಿವರು ರಾತ್ರಿ ಬೆಂಗಳೂರಿಗೆ ಹಿಂತಿರುಗಿದ್ದಾರೆ.ಶನಿವಾರ ಯಡಿಯೂರಪ್ಪ ಮತ್ತು ಸದಾನಂದಗೌಡರ ಜತೆ ಮಾತುಕತೆ ನಡೆಸಲಿದ್ದಾರೆ. ಉಭಯ ನಾಯಕರ ಭಾವನೆ-ಪ್ರತಿಕ್ರಿಯೆ ತಿಳಿದು ಮುಂದಿನ ವಾರ ಮತ್ತೆ ದೆಹಲಿಗೆ ಬರುವ ಸಂಭವವಿದೆ. ಹೈಕಮಾಂಡ್ ಪಕ್ಷದೊಳಗೆ ನೀಡುವ ಸ್ಥಾನಮಾನದಿಂದ ಯಡಿಯೂರಪ್ಪ ಸಮಾಧಾನಗೊಂಡರೆ ಸುಲಭವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಅವು ವಿವರಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.