ADVERTISEMENT

ರಾಜ್ಯದ ದೃಷ್ಟಿಯಿಂದ ಉತ್ತಮ ಬಜೆಟ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ನವದೆಹಲಿ: ಸಂಸತ್ತಿನಲ್ಲಿ ಬುಧವಾರ ಮಂಡನೆಯಾದ ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಒಂದೂ ಹೊಸ ಯೋಜನೆಗಳು ಘೋಷಣೆಯಾಗಿಲ್ಲ. ಗುಂತಕಲ್ ಬಳ್ಳಾರಿ- ಹೊಸಪೇಟೆ- ರಣಜಿತ್‌ಪುರ ಮಾರ್ಗ ವಿದ್ಯುದ್ದೀಕರಣ ಯೋಜನೆಗೆ ಬರೀ 10ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.

ರಾಜ್ಯದಲ್ಲಿ ನಡೆದಿರುವ ಯೋಜನೆಗಳಿಗೆ ಪ್ರಸಕ್ತ ಸಾಲಿನಲ್ಲಿ 609 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಹೊಸ ಮಾರ್ಗಗಳಿಗೆ 162 ಕೋಟಿ. ಗೇಜ್ ಪರಿವರ್ತನೆಗೆ 42.50ಕೋಟಿ, ಜೋಡಿ ಮಾರ್ಗಕ್ಕೆ 299 ಕೋಟಿ, ವಿದ್ಯುದ್ದೀಕರಣಕ್ಕೆ 105 ಕೋಟಿ ನೀಡಲಾಗಿದೆ.
 
ರಾಜ್ಯಕ್ಕೆ ಈಗಾಗಲೇ ಮಂಜೂರಾಗಿರುವ ಯೋಜನೆಗಳೇ ಬೇಕಾದಷ್ಟಿದೆ. ಈ ಯೋಜನೆಗಳು ಪೂರ್ಣಗೊಂಡರೆ ಜನರ ಬಹುತೇಕ ನಿರೀಕ್ಷೆಗಳು ಸಾಕಾರಗೊಳ್ಳಲಿದೆ. ಹೀಗಿರುವಾಗ ಹೊಸ ಯೋಜನೆಗಳನ್ನು ಪ್ರಕಟಿಸುವುದರಲ್ಲಿ ಅರ್ಥವೇನಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಪತ್ರಿಕಾಗೋಷ್ಠಿಯಲ್ಲಿ ಕೇಳಿದರು. `ರಾಜ್ಯದ ದೃಷ್ಟಿಯಿಂದ ಇದೊಂದು ಒಳ್ಳೆಯ ಬಜೆಟ್~ ಎಂದು ಬಣ್ಣಿಸಿದರು.

ರೈಲ್ವೆ ಬಜೆಟ್ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಮ್ಮ ಬೇಡಿಕೆಗಳಿಗೆ ಮಾನ್ಯತೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯದ ದೃಷ್ಟಿಯಿಂದ ಉತ್ತಮ ರೈಲ್ವೆ ಬಜೆಟ್ ಎಂದಿರುವ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಪ್ರಯಾಣ ದರ ಏರಿಕೆ ಸಮರ್ಥನೀಯ ಎಂದಿದ್ದಾರೆ. ಪ್ರಯಾಣ ದರ ಏರಿಸದಿದ್ದರೆ ಪ್ರಯಾಣಿಕರಿಗೆ ಮೂಲಸೌಲಭ್ಯ ಒದಗಿಸುವುದು ಹೇಗೆ ಎಂದಿದ್ದಾರೆ.

ಕೇಂದ್ರದ ಮಾಜಿ ಸಚಿವ ಅನಂತ ಕುಮಾರ್, ದೂರದೃಷ್ಟಿ ಇಲ್ಲದ ಬಜೆಟ್ ಇದು. ಯಾವುದೇ ಹೊಸ ಯೋಜನೆಗಳಿಲ್ಲ. ಪ್ರಯಾಣದರ ಏರಿಸುವ ಮೂಲಕ ಜನರ ಜೇಬಿಗೆ ಹೊರೆ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
 
ಧಾರವಾಡ ಲೋಕಸಭಾ ಸದಸ್ಯ ಪ್ರಹ್ಲಾದ ಜೋಶಿ, ಬೆಲೆ ಏರಿಕೆ ಸಮಸ್ಯೆಯಲ್ಲ. ಆದರೆ, ಉತ್ತರ ಕರ್ನಾಟಕಕ್ಕೆ ನ್ಯಾಯ ದೊರಕಿಸಿಲ್ಲ. ಜನರ ಸಮಸ್ಯೆಗಳನ್ನು ಪರಿಹಾರ ಮಾಡುವ ಕಡೆ ಗಮನ ಹರಿಸಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.