ADVERTISEMENT

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಬೆಂಬಲ ಕೋರಿದ ಡಿಎಂಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 10:50 IST
Last Updated 19 ಜೂನ್ 2013, 10:50 IST

ನವದೆಹಲಿ (ಪಿಟಿಐ): ರಾಜ್ಯಸಭೆಯ ಆರು ಸ್ಥಾನಗಳಿಗೆ ಜೂನ್ 27ರಂದು ನಡೆಯುವ ಚುನಾವಣೆಯ ಕಣ ರಂಗೇರಿದ್ದು, ಕನಿಮೋಳಿ ಅವರನ್ನು ಕಣಕ್ಕಿಳಿಸಿರುವ ಡಿಎಂಕೆ ತನ್ನ ಹಳೆಯ ಮಿತ್ರ ಪಕ್ಷವಾದ ಕಾಂಗ್ರೆಸ್‌ನ ಬೆಂಬಲ ಕೋರಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬುಧವಾರ ಭೇಟಿ ಮಾಡಿದ ಡಿಎಂಕೆ ಹಿರಿಯ ಮುಖಂಡ ಟಿ.ಆರ್.ಬಾಲು ಅವರು  ಪಕ್ಷದ ಮುಖ್ಯಸ್ಥ ಕರುಣಾನಿಧಿ ಅವರ ಪುತ್ರಿ ಕನಿಮೋಳಿ ಅವರನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿಕೊಂಡರು.

ಶ್ರೀಲಂಕಾ ತಮಿಳರ ಮೇಲಿನ ದೌರ್ಜನ್ಯ ವಿಷಯದಲ್ಲಿ ಕೆಲ ತಿಂಗಳ ಹಿಂದೆ ಯುಪಿಎಗೆ ನೀಡಿದ ಬೆಂಬಲವನ್ನು ಡಿಎಂಕೆ ಹಿಂದಕ್ಕೆ ಪಡೆದಿತ್ತು. ಆ ನಂತರದಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಮುಖಂಡರ ನಡುವೆ ನಡೆದ ಮೊದಲ ಭೇಟಿ ಇದಾಗಿದೆ.

ಆರು ಸ್ಥಾನಗಳಿಗಾಗಿ ನಟ ವಿಜಯಕಾಂತ ನೇತೃತ್ವದ ಡಿಎಂಡಿಕೆ ಹಾಗೂ ಡಿಎಂಕೆ ಮಧ್ಯೆ ಭಾರಿ ತುರುಸಿನ ಸ್ಪರ್ಧೆ ಏರ್ಪಟಿದ್ದು, ಎರಡು ಪಕ್ಷಗಳು ಕಾಂಗ್ರೆಸ್‌ನ ಬೆಂಬಲ ಕೋರಿವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಸಹಾಯಹಸ್ತ ಚಾಚುತ್ತದೆ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT