ADVERTISEMENT

ರಾಜ್ಯ ಪುನರ್ ವಿಂಗಡಣಾ ಆಯೋಗ ನೇಮಕ ಇಲ್ಲ: ಕೇಂದ್ರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): ಸಣ್ಣ ರಾಜ್ಯಗಳ ರಚನೆಗೆ ಸಂಬಂಧಿಸಿದಂತೆ ಎರಡನೇ ರಾಜ್ಯ ಪುನರ್ ವಿಂಗಡಣಾ ಆಯೋಗವನ್ನು ರಚಿಸಬೇಕೆಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ.

ಮಂಗಳವಾರ ಲೋಕಸಭೆಯಲ್ಲಿ ಈ ಕುರಿತು ಉತ್ತರಿಸಿದ ಗೃಹಖಾತೆಯ ರಾಜ್ಯ ಸಚಿವ ಗುರುದಾಸ್ ಕಾಮತ್, ಸಣ್ಣ ರಾಜ್ಯಗಳ ಪುನರ್‌ವಿಂಗಡಣೆ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸದ್ಯ ಯಾವುದೇ ಆಲೋಚನೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ಅಂತೆಯೇ ಯಾವುದೇ ರಾಜ್ಯದಿಂದಲೂ ಹೊಸ ರಾಜ್ಯ ರಚನೆಗೆ ಪ್ರಸ್ತಾವ ಬಂದಿಲ್ಲ ಎಂದು ತಿಳಿಸಿದರು.

ಸದ್ಯಕ್ಕೆ ಪ್ರತ್ಯೇಕ ರಾಜ್ಯ ರಚನೆಗಳ ಬೇಡಿಕೆ ಪಟ್ಟಿಯಲ್ಲಿ ಆಂಧ್ರಪ್ರದೇಶದ ತೆಲಂಗಾಣ, ಮಹಾರಾಷ್ಟ್ರದ ವಿದರ್ಭ, ಉತ್ತರ ಪ್ರದೇಶದ ಬುಂದೇಲ್‌ಖಂಡಗಳು ಪ್ರಮುಖವಾಗಿವೆ. ಇವುಗಳನ್ನು ಹೊರತುಪಡಿಸಿದರೆ ಕರ್ನಾಟಕದಿಂದ ಕೊಡಗು ಸೇರಿದಂತೆ ಕೆಲ ರಾಜ್ಯಗಳ ವಿವಿಧ ಸಂಘಟನೆಗಳು ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಮುಂದಿಟ್ಟಿವೆ.

ನೂತನ ರಾಜ್ಯ ರಚನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಸಮರ್ಪಕ ಅಂಶಗಳನ್ನು ಪರಿಗಣಿಸಿದ ನಂತರವೇ ನಿರ್ಧಾರ ಕೈಗೊಳ್ಳುತ್ತದೆ. ಇಂತಹ ನಿರ್ಧಾರ ಸಾಮಾನ್ಯ ಒಮ್ಮತಾಭಿಪ್ರಾಯಕ್ಕೆ ಅನುಗುಣವಾಗಿ ಇರುತ್ತದೆ ಎಂದು ಕಾಮತ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.