ADVERTISEMENT

ರಾಡಿಯಾ ಟೇಪ್: ಕೇಂದ್ರಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ವಿವಾದಿತ ನೀರಾ ರಾಡಿಯಾ ಧ್ವನಿ ಸುರುಳಿ ಸೋರಿಕೆ ಪ್ರಕರಣದ ತನಿಖಾ ವರದಿಯ ಪ್ರತಿಯನ್ನು ನೀಡುವಂತೆ ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಗುರುವಾರ ಸುಪ್ರೀಂಕೋರ್ಟ್ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದೆ.

ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಹಾಗೂ ಎಸ್.ಜೆ.ಮುಖ್ಯೋಪಾಧ್ಯಾಯ ಅವರನ್ನು ಒಳಗೊಂಡ ಪೀಠವು ಮೂರು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಮಾರ್ಚ್ 27ಕ್ಕೆ ನಿಗದಿಪಡಿಸಿದೆ.

ಆದಾಯ ತೆರಿಗೆ ಇಲಾಖೆಯು ಧ್ವನಿಮುದ್ರಿಸಿಕೊಂಡಿದ್ದ ರಾಡಿಯಾ ಅವರ ಸಂಭಾಷಣೆ ಹೇಗೆ ಸೋರಿಕೆಯಾಗಿದೆ ಎನ್ನುವುದರ ತನಿಖೆ ಪ್ರಗತಿಯಲ್ಲಿದೆ. ಆದ ಕಾರಣ ವರದಿಯ ಪ್ರತಿಯನ್ನು ನೀಡಲಾಗುವುದಿಲ್ಲ ಎಂದು ಈ ಮೊದಲು ಸರ್ಕಾರ ಹೇಳಿತ್ತು.

ಕಳೆದ ತಿಂಗಳ 31ರಂದು ಕೇಂದ್ರವು ಮುಚ್ಚಿದ ಲಕೋಟೆಯಲ್ಲಿ ಈ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿತ್ತು. ರಾಡಿಯಾ ಟೇಪ್ ಮಾಧ್ಯಮಗಳಿಗೆ ಸೋರಿಕೆಯಾಗಿದ್ದಕ್ಕೆ ಸರ್ಕಾರಿ ಸಂಸ್ಥೆಗಳು ಹೊಣೆಯಲ್ಲ ಎಂದೂ ಹೇಳಿತ್ತು.

ಕಾರ್ಪೊರೇಟ್ ಮಧ್ಯವರ್ತಿಯಾಗಿದ್ದ ರಾಡಿಯಾ ಅವರ ದೂರವಾಣಿ ಸಂಭಾಷಣೆಯ ಧ್ವನಿಮುದ್ರಣದಲ್ಲಿ 8 ರಿಂದ 10 ಸಂಸ್ಥೆಗಳು ಭಾಗಿಯಾಗಿದ್ದವು. ಸಂಭಾಷಣೆಯ ಆರಂಭ ಹಾಗೂ ಕೊನೆಯ ಅಂಶಗಳು ಮೂಲ ಧ್ವನಿಸುರುಳಿಗಳಿಗೆ ತಾಳೆಯಾಗುವುದಿಲ್ಲ ಎಂದು ವರದಿಯಲ್ಲಿ ಹೇಳಲಾದ ಅಂಶವನ್ನು ಸಿಂಘ್ವಿ ಪ್ರಸ್ತಾಪಿಸಿದ್ದರು.

ತನಿಖೆ ನಡೆಸಿದ ಅಧಿಕಾರಿಗಳಿಗೂ ಸೋರಿಕೆ ಮಾಡಿದ್ದು ಯಾರು ಎನ್ನುವುದು ಗೊತ್ತಿರಲಿಲ್ಲ ಎಂದು ವರದಿಯಲ್ಲಿ ಹೇಳಿದ್ದಾಗಿಯೂ ಅವರು ಸ್ಪಷ್ಟಪಡಿಸಿದ್ದರು. ಧ್ವನಿಸುರುಳಿ ಸೋರಿಕೆಯಲ್ಲಿ ಶಾಮೀಲಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ 2010ರ ನವೆಂಬರ್ 29 ರಂದು ಟಾಟಾ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ರಾಡಿಯಾ ಅವರೊಂದಿಗಿನ ತಮ್ಮ ಸಂಭಾಷಣೆಯನ್ನು ಬಹಿರಂಗಪಡಿಸಿದ್ದರಿಂದ ತಮ್ಮ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದಂತಾಗಿದೆ ಎಂದು ಟಾಟಾ ಆರೋಪಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.