ADVERTISEMENT

ರಾಡಿಯಾ ಮನೆಯಲ್ಲೇ ಸಿಬಿಐ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2010, 10:10 IST
Last Updated 22 ಡಿಸೆಂಬರ್ 2010, 10:10 IST

ನವದೆಹಲಿ (ಪಿಟಿಐ): ವಿಚಾರಣೆಗೆ ಹಾಜರಾಗಬೇಕಾದ ವ್ಯಕ್ತಿಗಳಿಗೆ ಸಮನ್ಸ್ ನೀಡಿ ತನ್ನ ಕೇಂದ್ರಸ್ಥಾನ ಅಥವಾ ಕಚೇರಿಗೇ ಕರೆಸಿಕೊಳ್ಳುತ್ತಿದ್ದ ಸಿಬಿಐ, 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಮಂಗಳವಾರ ಕಾರ್ಪೊರೇಟ್ ವಲಯದ ಪ್ರಭಾವಿ ಮಹಿಳೆ ಹಾಗೂ ವೈಷ್ಣವಿ ಕಮ್ಯುನಿಕೇಷನ್ಸ್ ಮುಖ್ಯಸ್ಥೆ ನೀರಾ ರಾಡಿಯಾ ಅವರನ್ನು ಹುಡುಕಿಕೊಂಡು ನೇರವಾಗಿ ಅವರ ನಿವಾಸಕ್ಕೇ ತೆರಳಿ ಪ್ರಶ್ನಿಸಿದೆ. ಈ ಬೆಳವಣಿಗೆ ಈಗ ಹಲವರ ಹುಬ್ಬೇರಿಸುವಂತೆಯೂ ಮಾಡಿದೆ.

ಸೋಮವಾರಷ್ಟೇ ಸಿಬಿಐ ರಾಡಿಯಾಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಸಮನ್ಸ್ ಜಾರಿ ಮಾಡಲು ಅವರಿಗಾಗಿ ಸಾಕಷ್ಟು ಹುಡುಕಾಟವನ್ನೂ ನಡೆಸಿತ್ತು ಎಂಬುದು ಗಮನಾರ್ಹ. ಆದರೆ ಮಂಗಳವಾರ ದಕ್ಷಿಣ ದೆಹಲಿಯ ಛತ್ತರಪುರ ಪ್ರದೇಶದಲ್ಲಿರುವ ರಾಡಿಯಾ ಅವರ ತೋಟದ ಮನೆಗೆ ಬೆಳಿಗ್ಗೆ 10ಕ್ಕೆ ಆಗಮಿಸಿದ ಸಿಬಿಐನ ವಿಶೇಷ ತಂಡ ಅವರನ್ನು ಹಗರಣಕ್ಕೆ ಸಂಬಂಧಿಸಿದಂತೆ ತೀವ್ರವಾಗಿ ಪ್ರಶ್ನಿಸಿತು ಎಂದು ಅಧಿಕೃತ ಮೂಲಗಳು ವಿವರಿಸಿವೆ. ಸಿಬಿಐನ ಈ ಕ್ರಮ ಈಗ ಅಚ್ಚರಿ ಮೂಡಿಸಿದೆ.

ವಿವರಣೆಗೆ ನಕಾರ: ಏತನ್ಮಧ್ಯೆ ಸಿಬಿಐ ವಕ್ತಾರರು ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದ್ದಾರೆ. ‘ಈ ಬಗ್ಗೆ ನಾವು ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಇದು ವಿಚಾರಣೆ ಮುಖ್ಯಸ್ಥರ ವಿಶೇಷಾಧಿಕಾರಕ್ಕೆ ಒಳಪಟ್ಟ ವಿಚಾರ. ಈ ಮುನ್ನವೂ ಇಂತಹ ಹಲವು ನಿದರ್ಶನಗಳು ಸಿಬಿಐ ಇತಿಹಾಸದಲ್ಲಿ ಇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಳೇ ಕೇಸು: ರಾಡಿಯಾ ಅವರ ವಿರುದ್ಧ ಹಳೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಎರಡೂ ಸಂಸ್ಥೆಗಳು ಅವರನ್ನು ವಿಚಾರಣೆ ನಡೆಸಿವೆ ಎನ್ನಲಾಗಿದೆ.

ರಾಡಿಯಾ ಅವರು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 22,000 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಕೆಲವು ವ್ಯಕ್ತಿಗಳು ಈ ಹಿಂದೆಯೇ ದೂರು ಸಲ್ಲಿಸಿದ್ದರು.

ಮುಖ್ಯವಾಗಿ ದೂರಸಂಪರ್ಕ ಇಲಾಖೆಯ ಕೆಲವು ಅಪರಿಚಿತ ವ್ಯಕ್ತಿಗಳು ಹಾಗೂ ಕೆಲವು ಖಾಸಗಿ ಕಂಪೆನಿಗಳು ಸಲ್ಲಿಸಿದ್ದ ಈ ದೂರನ್ನು 2009ರ ಅಕ್ಟೋಬರ್ 21ರಂದು ದಾಖಲಿಸಿಕೊಳ್ಳಲಾಗಿತ್ತು. ಇದರ ವಿಚಾರಣೆಯ ಹೊರೆಯನ್ನು ಸರ್ಕಾರ ಸಿಬಿಐ ಹೆಗಲಿಗೆ ವರ್ಗಾಯಿಸಿತ್ತು.

‘ಕೇಂದ್ರ ವಿಚಕ್ಷಣಾ ದಳದ ವಿವರಣೆಯ ಆಧಾರದ ಮೇಲೆ ರಾಡಿಯಾ ಅವರು ಬೊಕ್ಕಸಕ್ಕೆ ಉಂಟು ಮಾಡಿರುವ ನಷ್ಟವನ್ನು ಗುರುತಿಸಲಾಗಿದೆ’ ಎಂದು ಇವರ ವಿರುದ್ಧ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ. ಈ ಹಿನ್ನೆಲೆಯಲ್ಲಿಯೇ ಈಗ ಸಿಬಿಐ ತನ್ನ ತನಿಖೆ ಮುಂದುವರಿಸಿದೆ ಎಂದು ತಿಳಿದು ಬಂದಿದೆ.

ಈ ಮೊದಲೂ ಸಿಬಿಐ ರಾಡಿಯಾ ಅವರ ವೈಷ್ಣವಿ ಕಮ್ಯುನಿಕೇಷನ್ಸ್ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಕಳೆದ ತಿಂಗಳೂ ಸಹ ಜಾರಿ ನಿರ್ದೇಶನಾಲಯ ಇವರನ್ನು ತನ್ನ ಕೇಂದ್ರ ಕಚೇರಿಗೆ ಕರೆಸಿಕೊಂಡು ಪ್ರಶ್ನಿಸಿತ್ತು.

ಆದರೆ ಈಗ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ, ರಾಡಿಯಾ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಖ್ಯಾತ ಪತ್ರಕರ್ತರು, ಕೈಗಾರಿಕೋದ್ಯಮಿಗಳು, ರಾಜಕಾರಣಿಗಳ ಜೊತೆ ರಾಡಿಯಾ ನಿಕಟ ಸಂಪರ್ಕ ಹೊಂದಿದ್ದು ದೂರಸಂಪರ್ಕ ಇಲಾಖೆಯ ಮೇಲೆ ಮತ್ತು ಸರ್ಕಾರದ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರು. 2ಜಿ ಸ್ಪೆಕ್ಟ್ರಂ ಪರವಾನಗಿ ಸಂಬಂಧ ತೀವ್ರ ಲಾಬಿ ನಡೆಸಿದ್ದರು ಎಂಬ ಗಂಭೀರ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.